Local News – ವಿಶ್ವ ಮಾನವ ದಿನಾಚರಣೆ ಹಾಗೂ ಅಮರ ಶಿಲ್ಪಿ ಜಕಣಾಚಾರಿ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಇದೇ ಡಿ.30 ರಂದು ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಹಾಗೂ ಜ.1, 2025 ರಂದು ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸಲು ಮುಖಂಡರ ಸಭೆ ಕರೆದಿದ್ದು, ಮಹನೀಯರ ಜಯಂತಿಗಳನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಎಲ್ಲರೂ ತೀರ್ಮಾನಿಸಿದರು. ಅಂದು ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಂಘಸಂಸ್ಥೆಗಳು ಹಾಗೂ ನಾಗರೀಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ನಾಗಮಣಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕೃ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ವಿಶ್ವಕರ್ಮ ಸಮಾಜದ ಮುಖ್ಯಸ್ಥ ಬ್ರಹ್ಮಚಾರಿ, ಭೈರೇಗೌಡ ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಕಾರ್ಯದರ್ಶಿ ವೇಣುಗೋಪಾಲ, ಮುಖಂಡರಾದ ನಾರಾಯಣಸ್ವಾಮಿ, ಲಕ್ಷ್ಮಿನಾರಾಯಣರೆಡ್ಡಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಪಶು ಸಂಗೋಪನಾ ಇಲಾಖೆಯ ಸುಬ್ರಮಣಿ, ರೇಷ್ಮೆ ಇಲಾಖೆಯ ಮುನಿಸ್ವಾಮಿ ಸೇರಿದಂತೆ ಹಲವರು ಇದ್ದರು.