Farmers – ಸುಮಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದಂತಹ ರೈತರಿಗೆ ಸಾಗುವಳಿ ಚೀಟಿ ನೀಡುವಲ್ಲಿ ಸರ್ಕಾರಗಳು ಹಾಗೂ ಅಧಿಕಾರಿಗಳೂ ಸಹ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ ಆರೋಪಿಸಿದರು.
Farmers – ಪತ್ರಿಕಾಗೋಷ್ಟಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರ ಆರೋಪ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಚೇರಿಯಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅನೇಕ ಭೂ ರಹಿತ ರೈತರು ಸರ್ಕಾರದ ಬಗರ್ ಹುಕುಂ ಯೋಜನೆಯಡಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸಿಕೊಳ್ಳುತ್ತಿದ್ದಾರೆ. ತಮಗೆ ಜಮೀನು ಮಂಜೂರು ಮಾಡಿ ಸಾಗುವಳಿ ಚೀಟಿ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.

ಈಗಾಗಲೇ ಫಾರಂ.50, 53 ಹಾಗೂ 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸುಮಾರು 15-20 ವರ್ಷಗಳ ಹಿಂದೆ ಫಾರಂ ನಂ 50 ಹಾಗೂ 53 ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಇಂದಿಗೂ ಸಾಗುವಳಿ ಚೀಟಿ ನೀಡಿಲ್ಲ. ಇನ್ನೂ ಫಾರಂ 57 ರಲ್ಲಿ ಅರ್ಜಿ ಸಲ್ಲಿಸಿದ ಅನೇಕ ರೈತರ ಅರ್ಜಿಗಳನ್ನು ರದ್ದು ಮಾಡಿದ್ದಾರೆ. ಚುನಾವಣೆಗಳ ಸಮಯದಲ್ಲಿ ಮಾತ್ರ ಕೆಲವು ರೈತರಿಗೆ ಸಾಗುವಳಿ ಚೀಟಿಗಳನ್ನು ನೀಡುತ್ತಾರೆ. ಆದರೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಸಾಗುವಳಿ ಚೀಟಿಗಳನ್ನು ನೀಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದೀಗ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಒಳ್ಳೆಯ ಕೆಲಸವನ್ನು ಕೈಗೆತ್ತಿಕೊಂಡಿದ್ದು, ಅವರೊಂದಿಗೆ ನಮ್ಮ ರೈತ ಸಂಘ ಸಹ ಕೈಜೋಡಿಸುತ್ತದೆ ಎಂದರು.
Farmers – ರೈತರ ಹಕ್ಕಿಗಾಗಿ ಹೋರಾಟ: ಕರ್ನಾಟಕ ಭೂ ಹಕ್ಕುದಾರರ ವೇದಿಕೆ
ಬಳಿಕ ಕಚೇರಿಯಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ನಿರ್ದೇಶಕ ಬಾಲಗಂಗಾಧರ್ ಮಾತನಾಡಿ, ನಮ್ಮ ವೇದಿಕೆ ವತಿಯಿಂದ ಈಗಾಗಲೇ ಪಕ್ಕದ ಗೌರಿಬಿದನೂರು ತಾಲೂಕಿನಲ್ಲಿ ಪ್ರತಿಭಟನೆ, ಹೋರಾಟಗಳನ್ನು ಮಾಡಿ ಸುಮಾರು ವರ್ಷಗಳಿಂದ ರಚನೆಯಾಗದಂತಹ ಬಗರ್ ಹುಕುಂ ಸಮಿತಿಯನ್ನು ರಚನೆಯಾಗುವಂತೆ ಮಾಡಿದೆ. ಇದೀಗ ರೈತರಿಗೆ ಹಂತ ಹಂತವಾಗಿ ಜಮೀನು ಸಾಗುವಳಿ ಚೀಟಿ ದೊರೆಯಲಿದೆ. ಅದೇ ರೀತಿ ಗುಡಿಬಂಡೆಯಲ್ಲೂ ಸಹ ಸಾಕಷ್ಟು ರೈತರು ಸಾಗುವಳಿ ಚೀಟಿಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಗುಡಿಬಂಡೆಯಲ್ಲಿ ಸಮಿತಿ ರಚನೆಯಾಗಿ ವರ್ಷ ಕಳೆದಿದ್ದರೂ ಇನ್ನೂ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಆದ್ದರಿಂದ ನಮ್ಮ ವೇದಿಕೆಯ ವತಿಯಿಂದ ಗ್ರಾಮಗಳಲ್ಲಿ ಸರ್ವೆ ನಡೆಸಿ ಅರ್ಜಿ ಸಲ್ಲಿಸಿದ ರೈತರನ್ನು ಪತ್ತೆ ಮಾಡಿ, ಸಂಘಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಯ ಮುಂಭಾಗ ಹೋರಾಟ, ಪ್ರತಿಭಟನೆಗಳನ್ನು ಮಾಡಿ ರೈತರಿಗೆ ಜಮೀನು ದೊರಕಿಸಿಕೊಡುವ ಕೆಲಸ ಮಾಡಲಾಗುತ್ತದೆ. ಇದರ ಜೊತೆಗೆ ಕೂಲಿ ಕಾರ್ಮಿಕರು, ರೈತರಿಗೆ ಆಯುಷ್ಮಾನ್ ಕಾರ್ಡ್, ಲೇಬರ್ ಕಾರ್ಡ್ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವಂತ ಪ್ರಯತ್ನಗಳನ್ನು ಸಹ ಮಾಡಲಾಗುತ್ತದೆ ಎಂದರು.
Read this also : Farmers Protest : ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಬೆಸ್ಕಾಂ ಮುಂದೆ ರೈತರ ಪ್ರತಿಭಟನೆ….!
Farmers – ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದವರು
ಈ ವೇಳೆ ಚಲವಾದಿ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ಚಿಕ್ಕನರಸಿಂಹಪ್ಪ, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗುಡಿಬಂಡೆ ತಾಲೂಕು ಸಮಿತಿಯ ಅಧ್ಯಕ್ಷ ಜಯರಾಂ, ಸಂಯೋಜಕಿ ಸೌಭಾಗ್ಯ, ಕಾರ್ಯದರ್ಶಿ ಬೈಯಣ್ಣ, ಉಪಾಧ್ಯಕ್ಷ ಗೌಸ್ ಪೀರ್, ಸದಸ್ಯರಾದ ಶ್ರೀನಿವಾಸ್, ಭಾರತಮ್ಮ, ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಸಿಬ್ಬಂದಿಯಾದ ಸಂತೋಷ್ ಕುಮಾರ್ ಹಾಗೂ ಅನುಷಾ ಸೇರಿದಂತೆ ಹಲವರು ಇದ್ದರು.