ಓದಿ ಮುಂದೆ ಬರಬೇಕಾದ 10ನೇ ತರಗತಿಯ ಬಾಲಕಿಯೊಬ್ಬಳು ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ. ಕುಕನೂರು ತಾಲೂಕಿನ ಸರ್ಕಾರಿ ವಸತಿ ನಿಲಯದಲ್ಲಿ ನಡೆದಿರುವ ಈ ಕೃತ್ಯ, ಇಡೀ ಶಿಕ್ಷಣ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆ ಪೋಷಕರ ಎದೆಯಲ್ಲಿ ಢವಢವ ಹುಟ್ಟಿಸಿದ್ದು, ಹಾಸ್ಟೆಲ್ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

Koppal – ಘಟನೆಯ ವಿವರವೇನು?
ಕುಕನೂರು ತಾಲೂಕಿನ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದ 10ನೇ ತರಗತಿಯ ವಿದ್ಯಾರ್ಥಿನಿಗೆ ಏಕಾಏಕಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಆಕೆಯನ್ನು ಕೊಪ್ಪಳದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಬಾಲಕಿ ಗರ್ಭಿಣಿ ಎಂಬುದು ದೃಢಪಟ್ಟಿದ್ದು, ಆಸ್ಪತ್ರೆಯಲ್ಲೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
Koppal – ಅಧಿಕಾರಿಗಳ ದೌಡು – ಆರೋಪಿ ಅಂದರ್
ಅಪ್ರಾಪ್ತ ಬಾಲಕಿ ತಾಯಿಯಾದ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಇತ್ತ ಪೊಲೀಸರು ಬಾಲಕಿಯ ಈ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Read this also : ಜುಟ್ಟು ಹಿಡಿದು ಎಳೆದಾಡಿದ ಅಮಾನವೀಯ ಘಟನೆ: ಬೆಂಗಳೂರಿನಲ್ಲಿ ನಡೆದ ‘ಈ’ ದೃಶ್ಯ ಕಂಡು ನೆಟ್ಟಿಗರು ಫೈರ್..!

Koppal – ವಾರ್ಡನ್ ವಿರುದ್ಧ ಪಾಲಕರ ಆಕ್ರೋಶ
ಈ ಘಟನೆ ಹಲವು ಅನುಮಾನಗಳಿಗೆ ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿ ಬರೋಬ್ಬರಿ 9 ತಿಂಗಳು ಗರ್ಭಿಣಿಯಾಗಿದ್ದರೂ ಹಾಸ್ಟೆಲ್ ವಾರ್ಡನ್ ಅಥವಾ ಅಲ್ಲಿನ ಸಿಬ್ಬಂದಿಯ ಗಮನಕ್ಕೆ ಬಾರದೇ ಹೋಗಿದ್ದು ಹೇಗೆ? ಇದು ಗೊತ್ತಿದ್ದೂ ಸಿಬ್ಬಂದಿ ಕಣ್ಮುಚ್ಚಿ ಕುಳಿತಿದ್ದರೇ? ಅಥವಾ ನಿರ್ಲಕ್ಷ್ಯವೇ? ಎಂದು ಗ್ರಾಮಸ್ಥರು ಮತ್ತು ಪೋಷಕರು ಪ್ರಶ್ನಿಸುತ್ತಿದ್ದಾರೆ. “ಹೆಣ್ಣುಮಕ್ಕಳ ರಕ್ಷಣೆಗಾಗಿಯೇ ಇರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಇಂತಹ ಘಟನೆ ನಡೆದರೆ, ನಾವು ಯಾರನ್ನು ನಂಬಿ ಶಾಲೆಗೆ ಮಕ್ಕಳನ್ನು ಕಳಿಸಬೇಕು?” ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ನಿರ್ಲಕ್ಷ್ಯದ ಪರಮಾವಧಿ ಎಂದು ಕಿಡಿಕಾರಿದ್ದಾರೆ.
