ಸದ್ಯ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ದಿನೇ ದಿನೇ ಮತಷ್ಟು ಗಂಭೀರವಾಗುತ್ತಿದೆ. ಈ ಹಾದಿಯಲ್ಲೇ ಮೈಸೂರಿನ ಕೆ.ಆರ್ ನಗರದ ಸಂತ್ರಸ್ತೆಯನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದ್ದು, ಇದೀಗ ಆ ಯುವತಿಯನ್ನು ಎಸ್.ಐ.ಟಿ ತಂಡ ರಕ್ಷಣೆ ಮಾಡಿ ಬೆಂಗಳೂರಿಗೆ ಕರೆತರುತ್ತಿದೆ ಎಂದು ತಿಳಿದುಬಂದಿದೆ.
ರೇವಣ್ಣ ವಿರುದ್ದ ಮೈಸೂರು ಜಿಲ್ಲೆ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗ ದೂರು ದಾಖಲಿಸಿದ್ದರು. ರೇವಣ್ಣ ಹಾಗೂ ಸತೀಶ್ ಬಾಬಣ್ಣ ಎಂಬುವವರ ವಿರುದ್ದ ದೂರು ದಾಖಲಿಸಿದ್ದರು. ಬಾಬಣ್ಣ ಎಂಬಾತ ನಮ್ಮ ಮನೆಗೆ ಬಂದು ಭವಾನಿ ಅಕ್ಕ ಕರೆಯುತ್ತಿದ್ದಾರೆ ಎಂದು ನಮ್ಮ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಂದಿನಿಂದ ನನ್ನ ತಾಯಿ ನಾಪತ್ತೆಯಾಗಿದ್ದಾರೆ. ಪೊಲೀಸರು ಕೇಳಿದರೇ ನಮಗೇನು ಗೊತ್ತಿಲ್ಲ ಅಂತಾ ಹೇಳಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿನಂತೆ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಮೈಸೂರು ಜಿಲ್ಲೆ ಹುಣಸೂರು ಬಳಿಕ ಕಾಳೇನಹಳ್ಳಿ ತೋಟದ ಮನೆಯಿಂದ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಎಸ್.ಪಿ. ಸೀಮಾ ಲಾಠ್ಕರ್ ತಂಡದಿಂದ ಮಹಿಳೆಯನ್ನು ರಕ್ಷಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನಲ್ಲಿ ಹೆಚ್.ಡಿ.ರೇವಣ್ಣ ರವರ ಹೆಸರು ಸಹ ತಗಲಾಕಿಕೊಂಡಿದೆ. ರೇವಣ್ಣ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ನಡುವೆ ಸಂತ್ರಸ್ತೆಯ ಕಿಡ್ನಾಪ್ ನಡೆದಿದೆ ಎಂಬ ಸುದ್ದಿ ಕೇಳಿಬಂತು. ಸಂತ್ರಸ್ತ ಮಹಿಳೆಯನ್ನು ಅಪಹರಿಸಿ ಎಲ್ಲಿಟ್ಟಿದ್ದಾರೆ ಎಂದು ಎಸ್.ಐ.ಟಿ ತನಿಖೆ ನಡೆಸಿದ್ದು, ಸಂತ್ರಸ್ತೆಯನ್ನು ಪತ್ತೆಹಚ್ಚಲಾಗಿದೆ. ಜೊತೆಗೆ ಸಂತ್ರಸ್ತೆ ಹಲ್ಲೆಗೆ ಒಳಗಾದ ಸ್ಥಿತಿಯಲ್ಲಿದ್ದರು ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ಸಂಬಂಧ ವಿಚಾರಣೆ ನಡೆದಿದ್ದು, ಸುಮಾರು 2 ಗಂಟೆಗಳ ಕಾಲ ವಿಚಾರಣೆ ಮಾಡಲಾಯಿತು. ಸಂಜೆ 6.25ರ ಸಮಯಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ. ಮೇ.6 ಕ್ಕೆ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿದುಬಂದಿದೆ.