ಕೆಲವು ಮಹಿಳೆಯರು ತಮ್ಮನ್ನು ಅಧಿಕಾರಿಯೆಂದು, ಮಾಡಲ್ ಎಂದೂ ಹೀಗೆ ವಿವಿಧ ರೀತಿಯಲ್ಲಿ ಅನೇಕ ಪುರುಷರನ್ನು ವಂಚನೆ ಮಾಡುತ್ತಿರುವ ಬಗ್ಗೆ ಕೇಳಿರುತ್ತೇವೆ. ಅದಕ್ಕೆ ಹನಿಟ್ರಾಪ್ ಎಂತಲೂ ಕರೆಯಲಾಗುತ್ತದೆ. ಇದೇ ಮಾದರಿಯಲ್ಲಿ ಮಹಿಳೆಯೊಬ್ಬಳು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಹಲವರನ್ನು ಹನಿಟ್ರಾಪ್ ಮೂಲಕ ಸುಲಿಗೆ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಆಕೆಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಆ ಮಹಿಳೆಯ ಕಥೆ ಏನು ಎಂಬುದನ್ನು ತಿಳಿಯಲು ಮುಂದೆ ಓದಿ.
ಹನಿಟ್ರಾಪ್ ಮೂಲಕ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರ ಬಳಿ ಸುಲಿಗೆ ಮಾಡಿದ ಆರೋಪ ಕಾಸರಗೋಡಿನ ಕೊಂಬನಡುಕ್ಕಂ ನಿವಾಸಿ ಶ್ರುತಿ ಚಂದ್ರಶೇಖರನ್ ವಿರುದ್ದ ಕೇಳಿಬಂದಿದ್ದು, ತಾನು IAS ಹಾಗೂ ISRO ಅಧಿಕಾರಿಯೆಂದು ಹೇಳಿಕೊಂಡು ಅನೇಕರಿಗೆ ಮೋಸ ಮಾಡಿದ್ದಾಳೆ. ಇನ್ಸ್ಟಾಗ್ರಾಂ ಮೂಲಕ ಈಕೆಯನ್ನು ಭೇಟಿಯಾದ ಪೊಯಿನಾಚಿ ಮೂಲದ ವ್ಯಕ್ತಿಯೊಬ್ಬ ನೀಡಿದ ದೂರಿನ ಮೇರೆಗೆ ಆಕೆಯ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ ಎನ್ನಲಾಗಿದೆ. ಆರೋಪಿ ಶ್ರುತಿ ಚಂದ್ರಶೇಖರನ್ ತನ್ನನ್ನು ಇಸ್ರೋ ಅಧಿಕಾರಿಯೆಂದು ಪರಿಚಯಿಸಿಕೊಂಡು ನಕಲಿ ದಾಖಲೆಗಳನ್ನು ನೀಡಿದ್ದಳು. ಬಳಿಕ ದೂರುದಾರರನಿಂದ ಒಂದು ಲಕ್ಷ ಹಣ ಹಾಗೂ ಚಿನ್ನಾಭರಣ ದೋಚಿದ್ದಾಳೆ. ದೂರುದಾರ ನೀಡಿದ ದೂರಿನಂತೆ ತನಿಖೆ ನಡೆಸಿದಾಗ ಆಕೆಯ ಬಂಡವಾಳ ಬಯಲಾಗಿದೆ. ಆಕೆ ಈ ಹಿಂದೆಯೂ ಇದೇ ಮಾದರಿಯಲ್ಲಿ ಮೋಸ ಮಾಡಿದ್ದಳೆಂದು ತಿಳಿದುಬಂದಿದೆ. ಜೊತೆಗೆ ಆಕೆಯ ವಿರುದ್ದ ದೂರು ನೀಡಲು ಮುಂದಾದ ಯುವಕ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಸುಳ್ಳು ಆರೋಪ ಸಹ ಹೊರಿಸಿದ್ದಾಳೆ ಎನ್ನಲಾಗಿದೆ. ಆಕೆ ಕಾಸರಗೋಡು ಪೊಲೀಸ್ ಅಧಿಕಾರಿಗಳನ್ನೂ ಸಹ ಹನಿಟ್ರಾಪ್ ನಲ್ಲಿ ಸಿಲುಕಿಸಿದ್ದಾಳೆ ಎಂದು ತಿಳಿದುಬಂದಿದೆ.
ಈ ಹಿಂದೆ ಪುಲ್ಲೂರು-ಪೆರಿಯಾದ ಯುವಕ ಮಂಗಳೂರಿನಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಪಾಲಾದಾಗ ಈಕೆಯ ವಂಚನೆ ಬೆಳಕಿಗೆ ಬಂದಿತ್ತು. ಇಸ್ರೋ ಸಹಾಯಕ ಇಂಜಿನಿಯರ್ ಚಾಮಹುನ್ ಮತ್ತು ಐಎಎಸ್ ವಿದ್ಯಾರ್ಥಿ ಚಾಮಹುನ್ ಎಂಬ ಯುವಕರಿಗೆ ಹಾಗೂ ಕೆಲ ಪೊಲೀಸ್ ಅಧಿಕಾರಿಗಳಿಗೂ ಸಹ ಬಲೆ ಬೀಸಿ, ಮದುವೆಯಾಗುವುದಾಗಿ ನಂಬಿಸಿದ್ದಳಂತೆ. ಆಕೆಯ ವಂಚನೆಯ ಬಗ್ಗೆ ತಿಳಿದ ನಂತರ ಅನೇಕರು ಮಾನಹಾನಿಯಾಗಬಹುದೆಂಬ ಭೀತಿಯಿಂದ ಹಲವು ಪೊಲೀಸರು ಮಾಹಿತಿಯನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಇನ್ನೂ ಪೆರಿಯಾ ಮೂಲದ ಯುವಕನ ತಾಯಿಯ ಚಿನ್ನದ ಸರವನ್ನೂ ಸಹ ಶ್ರುತಿ ಚಂದ್ರಶೇಖರನ್ ಕದ್ದಿದ್ದಾಳಾಂತೆ. ಆಕೆ ಎಷ್ಟು ಖತರ್ನಾಕ್ ಎಂದರೇ ಜೈಲಿನಲ್ಲಿರುವ ಯುವಕನಿಂದಲೇ ಬರೊಬ್ಬರಿ 5 ಲಕ್ಷ ರುಪಾಯಿ ಸುಲಿಗೆ ಮಾಡಿದ್ದಾಳೆ. ಸದ್ಯ ನಕಲಿ ದಾಖಲೆ ಸೃಷ್ಟಿ ಹಾಗೂ ವಂಚನೆ ಪ್ರಕರಣದಲ್ಲಿ ಯುವತಿಯ ವಿರುದ್ದ ಮೇಲ್ಪರಂಪ ಪೊಲೀಸರು ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.