Karnataka Rakshana Vedike – ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಕನ್ನಡದ ಹಾಡು, ನೃತ್ಯಗಳಿಗೆ ಪ್ರಾಮುಖ್ಯತೆ ಕೊಡಬೇಕು, ಇಲ್ಲದಿದ್ದರೆ ಕರವೇ ವತಿಯಿಂದ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್ ಹರೀಶ್ ಎಚ್ಚರಿಕೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಬಿಇಒ ಕಚೇರಿಯಲ್ಲಿ ಎಲ್ಲ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ತಪ್ಪದೇ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಬೇಕೆಂದು ಕರವೇ (Karnataka Rakshana Vedike) ತಾಲೂಕು ಘಟಕದ ವತಿಯಿಂದ ಬಿಇಒ ವೆಂಕಟೇಶಪ್ಪರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರುನಾಮಕರಣವಾಗಿ 50 ವರ್ಷಗಳು ಕಳೆದಿವೆ. ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ಭುವನೇಶ್ವರಿ ರಥವನ್ನು ನಾಡಿನಾದ್ಯಂತ ಸಂಚರಿಸಿ ಕನ್ನಡದ ಹಿರಿಮೆಯನ್ನು ಸಾಮಾನ್ಯ ಜನರಿಗೂ ತಲುಪುವಂತೆ ಮಾಡುತ್ತಿದೆ. ಇಂತಹ ಹೆಮ್ಮೆಯ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ಎಲ್ಲೆಡೆ ಕಂಪು ಪಸರಿಸಬೇಕು. ಮನೆ,ಮನ ಭಾಷೆಯಾಗಿ ಕನ್ನಡ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಯಾವುದೇ ಕಾರಣಕ್ಕೂ ಕನ್ನಡೇತರ ಹಾಡುಗಳಿಗೆ ಮತ್ತು ಭಾಷಣಗಳಿಗೆ ಅವಕಾಶ ನೀಡಬಾರದು. ಹೆಚ್ಚು ಹೆಚ್ಚು ಕನ್ನಡ ಗೀತೆಗಳು ಸೇರಿದಂತೆ ಕನ್ನಡ ಇತಿಹಾಸ ಸಾರುವ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಮಕ್ಕಳಲ್ಲಿ ಕನ್ನಡದ ಪ್ರೀತಿಯನ್ನು ತುಂಬಲು ಕ್ರಮವಹಿಸಬೇಕು ಇಲ್ಲದಿದ್ದರೆ ಕರವೇ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ಕರವೇ ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಜಾತಮ್ಮ, ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ತಾಲೂಕು ಸಹ ಸಂಚಾಲಕ ಜಹಾಂಗೀರ್, ಆಟೋ ಘಟಕದ ಅಧ್ಯಕ್ಷ ಜಬಿವುಲ್ಲಾ, ಉಪಾಧ್ಯಕ್ಷ ಇರ್ಷಾದ್, ತಾಲೂಕು ಖಜಾಂಚಿ ನಾರಾಯಣಸ್ವಾಮಿ, ತಾಲೂಕು ಸಂಘಟನಾ ಕಾರ್ಯದರ್ಶಿ, ಶಂಕರ್ ಡಿ.ಎನ್, ಕಾರ್ಮಿಕ ಘಟಕದ ಅಧ್ಯಕ್ಷ ಕೃಷ್ಣಪ್ಪ, ವೆಂಕಟೇಶ್, ಮುಖಂಡರಾದ ಅಕೀಲ್, ಅಭಿನಂದನ್ ಇತರರು ಇದ್ದರು.