Karnataka Darshan – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಿರುವ 2024 -25ನೇ ಸಾಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್. ಕೃಷ್ಣಪ್ಪ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಅವರು, ದೇಶ ಸುತ್ತು ಕೋಶ ಓದು ಎಂದು ಪೂರ್ವಿಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ ಎಲ್ಲಾ ರೀತಿಯ ಉಚಿತ ಸಹಕಾರ ನೀಡುತ್ತಿರುವ ಸರ್ಕಾರ ಕರ್ನಾಟಕ ದರ್ಶನ ಎಂಬ ಶೈಕ್ಷಣಿಕ ಪ್ರವಾಸಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ವಿವಿಧೆಡೆಗೆ ಉಚಿತವಾಗಿ ಕಳುಹಿಸಿಕೊಡುತ್ತಿದೆ. ಈ ಪ್ರವಾಸ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಗುಡಿಬಂಡೆ ತಾಲೂಕಿನ ಪರಿಶಿಷ್ಟ ಜಾತಿ 41 ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ 22 ವಿದ್ಯಾರ್ಥಿಗಳು ಒಟ್ಟು 63 ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಲಿದ್ದಾರೆ. 5 ದಿನದ ಪ್ರವಾಸ ಇದಾಗಿದ್ದು, ಜೋಗ್ ಫಾಲ್ಸ್, ಮುರುಡೇಶ್ವರ, ಶಿರಸಿ, ಉಡುಪಿ, ಮೈಸೂರು ಸೇರಿ ಹಲವು ಪ್ರವಾಸಿ ತಾಣಗಳನ್ನು ವಿದ್ಯಾರ್ಥಿಗಳು ವೀಕ್ಷಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇಓ ಎಂ.ನಾಗಮಣಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣ ಸ್ವಾಮಿ, ಮುನಿಕೃಷ್ಣ, ರಾಜಶೇಖರ್, ಕೃಷ್ಣಪ್ಪ, ಶಿಕ್ಷಣ ಇಲಾಖೆಯ ಇಸಿಓ ನಂಜುಂಡಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ವಿ. ಗಂಗರತ್ನಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿ. ಶ್ರೀರಾಮಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಹಾಗೂ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪಾಲಕರು ಇದ್ದರು.