moral stories ಒಂದು ಊರಲ್ಲಿ ಒಂದು ಪುಟ್ಟ ಮನೆ ಇತ್ತು. ಆ ಮನೆಯಲ್ಲಿ ಪುಟ್ಟದೊಂದು ಮುದ್ದಾದ ಮಗು ಇತ್ತು. ಎಲ್ಲರೂ ಆ ಮಗುವನ್ನು ಪ್ರೀತಿಯಿಂದ ಅಮ್ಮುಲು ಅಂತಾ ಕರೆಯುತ್ತಿದ್ದರು. ಅಮ್ಮುಲುಗೆ ಪ್ರಾಣಿ, ಪಕ್ಷಿಗಳು ಅಂದ್ರೆ ತುಂಬಾ ಇಷ್ಟ. ಒಂದು ದಿನ ಅಮ್ಮುಲು ಮನೆ ಮುಂದೆ ಆಟ ಆಡುವಾಗ ಅವರ ಮನೆ ಹತ್ತಿರ ನಾಯಿ ಬಂತು. ಅದನ್ನ ಅವಳು ಪ್ರೀತಿಯಿಂದ ಬಾ ಬಾ ಅಂತ ಕರೆದರೆ ಅದು ಓಡಿ ಹೊಗುತ್ತದೆ. ಇನ್ನೊಂದು ದಿನ ಬೆಕ್ಕು ಬರುತ್ತೆ. ಅದನ್ನ ಅಮ್ಮುಲು ಬಾ ಬಾ ಕರೆದರು ಅದು ಕೂಡಾ ಓಡಿ ಹೊಗುತ್ತದೆ. ಮತ್ತೊಂದು ದಿನ ಗುಬ್ಬಚ್ಚಿಗಳು ಮನೆ ಮುಂದೆ ಬಂದಿತ್ತು. ಅಮ್ಮುಲು ಅವುಗಳನ್ನು ಪ್ರೀತಿಯಿಂದ ಬಾ ಅಂತ ಕರೆದರೆ ಅವುಗಳು ಕೂಡ ಹಾರಿ ಹೋಗುತ್ತವೆ.
ಇದರಿಂದ ಅಮ್ಮುಲುಗೆ ತುಂಬಾ ಬೇಸರ ಆಗುತ್ತೆ. ಆಗ ಅಮ್ಮುಲು ಒಂದು ಪ್ಲಾನ್ ಮಾಡುತ್ತಾಳೆ. ಒಂದು ಗಿಡವನ್ನು ತಗೊಂಡು ಬಂದು ಅವರ ಮನೆ ಮುಂದೆ ಇರೋ ಜಾಗದಲ್ಲಿ ನೆಡುತ್ತಾಳೆ. ಆ ಗಿಡವನ್ನು ಬಹಳ ಪ್ರೀತಿಯಿಂದ ನೀರು ಹಾಕಿ ಬೆಳೆಸುತ್ತಾಳೆ. ಆ ಗಿಡ ಸ್ವಲ್ಪ ದಿನಗಳಲ್ಲಿ ಬೆಳೆದು ದೊಡ್ಡದಾಗುತ್ತದೆ. ಆಗ ಗುಬ್ಬಚ್ಚಿಗಳು ಆ ಮರದಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತವೆ. ಆಮೇಲೆ ಅಮ್ಮುಲು ಪ್ರತಿದಿನ ಮನೆ ಮುಂದೆ ಆ ಗುಬ್ಬಚ್ಚಳಿಗೆ ಕಾಳುಗಳನ್ನು ಹಾಕುತ್ತಿದ್ದಳು. ಅವುಗಳೆಲ್ಲಾ ಅದನ್ನು ತಿಂದು ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಅಂದಿನಿಂದ ಗುಬ್ಬಚ್ಚಿಗಳು ಊಟಕ್ಕಾಗಿ ಪ್ರತಿದಿನ ಅಮ್ಮುಲು ಮನೆ ಹತ್ರ ಅವಳನ್ನು ಹುಡುಕಿಕೊಂಡು ಬರುತ್ತಿದ್ದವು. ಹೀಗೆ ಅಮ್ಮುಲು ಮತ್ತು ಗುಬ್ಬಚ್ಚಿಗಳು ಸ್ನೇಹಿತರಾಗಿಬಿಡ್ತಾರೆ.
ಒಂದು ದಿನ ಅಮ್ಮುಲು ಗುಬ್ಬಚ್ಚಿಗಳ ಜೊತೆ ಆಟ ಆಡುತ್ತಿರುವಾಗ ನಾಯಿ ಮತ್ತು ಬೆಕ್ಕು ಆ ಗುಬ್ಬಚ್ಚಿಗಳನ್ನು ಹಿಡಿದು ತಿನ್ನೋಕೆ ಬರುತ್ತವೆ. ಆದ್ರೆ ಅಮ್ಮುಲು ಇದಕ್ಕೆಲ್ಲಾ ಅವಕಾಶ ಮಾಡಿಕೊಡದೆ ನಾಯಿಗೆ ಬಿಸ್ಕತ್ ಹಾಗೂ ಬೆಕ್ಕಿಗೆ ಹಾಲನ್ನು ಹಾಕುತ್ತಾಳೆ. ನಾಯಿ ಮತ್ತು ಬೆಕ್ಕಿಗೆ ಇದರಿಂದ ಖುಷಿಯಾಗಿ ಅಂದಿನಿಂದ ಅವುಗಳು ಕೂಡಾ ಅಮ್ಮುಲು ಜೊತೆ ಸ್ನೇಹದಿಂದ ಇರುತ್ತವೆ. ಹೀಗೆ ಅಮ್ಮುಲು, ಗುಬ್ಬಚ್ಚಿಗಳು, ನಾಯಿ ಮತ್ತು ಬೆಕ್ಕು ಎಲ್ಲರೂ ಸ್ನೇಹದಿಂದ ಒಟ್ಟುಗೂಡಿ ಆಟ ಆಡುತ್ತಾ ಒಂದಾಗಿ ಬದುಕುತ್ತಾರೆ. ಇದರಿಂದ ಅಮ್ಮುಲುಗೆ ಬಹಳ ಖುಷಿಯಾಗುತ್ತದೆ.
ನೀತಿ: ಬೇಕು ಅಂದುಕೊಂಡಿದ್ದನ್ನು ಪಡೆಯಲು ಛಲವನ್ನು ಹೊಂದಿ, ಅದನ್ನು ತಾಳ್ಮೆ ಮತ್ತು ಪ್ರೀತಿಯಿಂದ ಪಡೆದುಕೊಳ್ಳಬೇಕು
ಮಮತಾ ಎಂ
ಎಂ.ಜಿ ರಸ್ತೆ, ಚಿಕ್ಕಬಳ್ಳಾಪುರ