Hindu Temple – ಭಕ್ತರ ಪಾಲಿನ ಆರಾಧ್ಯ ದೈವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಶ್ರೀ ಎಲ್ಲೋಡು ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವರ ಜಾತ್ರಾ ಮಹೋತ್ಸವ ಫೆ.10 ರಿಂದ ಫೆ.23 ರವರೆಗೆ ನಡೆಯಲಿದೆ. ಫೆ.16 ರಂದು ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಫೆ.17 ರಂದು ಹೂವಿನ ಪಲ್ಲಕಿ ಕಾರ್ಯಕ್ರಮ ನಡೆಯಲಿದ್ದು, ಅಪಾರ ಸಂಖ್ಯೆಯ ಜನತೆ ಭಾಗಿಯಾಗಲಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ಸಹ ಏರ್ಪಡಿಸಿದ್ದಾರೆ.

Hindu Temple – ಎಲ್ಲೋಡು ಕ್ಷೇತ್ರದ ಇತಿಹಾಸ
ಈ ಕುರಿತು ಗುಡಿಬಂಡೆ ತಾಲೂಕು ಬ್ರಾಹ್ಮಣ ಸಂಘದ ಸೂರ್ಯಪ್ರಕಾಶ್ ಮಾಹಿತಿ ನೀಡಿದ್ದು, ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ನೆಲೆಸಿರುವ ಆದಿನಾರಾಯಣಸ್ವಾಮಿ ರಾಜ್ಯ ಮತ್ತು ಹೊರ ರಾಜ್ಯದ ಭಕ್ತಾಧಿಗಳನ್ನು ಹೊಂದಿದ್ದು ಇದು ಒಂದು ಪ್ರಮುಖ ಯತ್ರಾಸ್ಥಳವಾಗಿದೆ, ಪಂಚನಾರಾಯಣ ಕ್ಷೇತಗಳಲ್ಲಿ ಒಂದೆನಿಸಿರುವ ಲಕ್ಷ್ಮೀ ಆದಿನಾರಾಯಣಸ್ವಾಮಿ ಉಗಮ ಸ್ಥಾನವೇ ಕೂರ್ಮಗಿರಿ ಎಲ್ಲೋಡು ಆದಿನಾರಾಯಾಣಸ್ವಾಮಿ ಬೆಟ್ಟ, ಸಂಪೂರ್ಣವಾಗಿ ಅಮೆಯಾಕಾರದಲ್ಲಿದ್ದು. ಇದಕ್ಕೆ ಕೂರ್ಮಗಿರಿ ಬೆಟ್ಟವೆಂದೂ ಕರೆಯುತ್ತಾರೆ.
ಹಿಂದೂಗಳ ಪಾಲಿಗೆ ಪರಮ ಪವಿತ್ರವಾದ ಪಂಚ ನಾರಾಯಣ ಕ್ಷೇತ್ರಗಳ ಪೈಕಿ ಉತ್ತರದ ಬದರಿನಾರಾಯಣ, ಗದುಗಿನ ವೀರನಾರಾಯಣ, ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸನ್ನಿಧಿಗಳು ಮೂರಾದರೆ ಇನ್ನೆರಡು ಕ್ಷೇತ್ರಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದ ಅಮರನಾರಾಯಣಸ್ವಾಮಿ ಹಾಗೂ ಗುಡಿಬಂಡೆ ತಾಲೂಕಿನ ಹಾಗೂ ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳು ನಾಡಿನ ಜನರ ಆರಾಧ್ಯ ದೈವವೆಂದೆ ಪ್ರಸಿದ್ಧಿಯಾಗಿರುವ ಯಲ್ಲೋಡು ಆದಿನಾರಾಯಣ ಸ್ವಾಮಿಯ ದಿವ್ಯ ಕ್ಷೇತ್ರಗಳಾಗಿವೆ ಎಂದರು.
Hindu Temple – ಬ್ರಹ್ಮರಥೋತ್ಸವ ಆಚರಣೆ ನಡೆದು ಬಂದ ದಾರಿ

ಇನ್ನೂ ಕ್ಷೇತ್ರದ ಇತಿಹಾಸದ ವಿಚಾರಕ್ಕೆ ಬಂದರೇ, ಈ ಭಾಗದಲ್ಲಿ ಹೆಚ್ಚಾಗಿ ರೆಡ್ಡಿ ಜನಾಂಗದವರೇ ವಾಸಿಸುವ ಗ್ರಾಮವಾಗಿದ್ದು ಸುಮಾರು 450 ವರ್ಷಗಳ ಹಿಂದೆ ನೆರೆಯ ಆಂಧ್ರ ಪ್ರದೇಶದಿಂದ ವಲಸೆ ಬಂದ ರೆಡ್ಡಿ ಮನೆತನದ ಯರ್ರಪ್ಪ ರೆಡ್ಡಿ ಮತ್ತು ಚಿನ್ನಪ್ಪ ರೆಡ್ಡಿ ಎಂಬ ಸಹೋದರರಿಂದ ಸ್ಥಾಪಿತವಾಯಿತು ಎಂಬ ಐತಿಹ್ಯವಿದೆ. ಆಗ ಈ ಗ್ರಾಮವನ್ನು ಯಲುವಲಲೋಡು ಎಂಬುದಾಗಿ ಕರೆಯಲಾಗುತ್ತಿದ್ದು ಕಾಲಕ್ರಮೇಣ ಇದು ಜನಗಳ ಬಾಯಲ್ಲಿ ಯಲ್ಲೋಡು ಎಂದಾಯಿತು. ತಮಿಳುನಾಡು ಮೂಲದ ದಂಪತಿಗಳಾದ ಸುಂದರಶರ್ಮ ಮತ್ತು ಜ್ಞಾನಾಂಭ ಎಂಬ ದಂಪತಿಗಳು ಪವಿತ್ರ ಮಾಘ ಮಾಸದ ಮೂರನೇ ಭಾನುವಾರದ ದಿನ ಬೆಟ್ಟದ ಮೇಲಿನ ಆದಿನಾರಾಯಣಸ್ವಾಮಿ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ತಮ್ಮ ಇಷ್ಟಾರ್ಥ ಸಿದ್ದಿಸಿಕೊಂಡ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನ ತನಕ ಈ ಶುಭ ಮುಹೂರ್ತದಂದು ಪ್ರತಿ ವರ್ಷ ವೈಭವದ ಬ್ರಹ್ಮ ರಥೋತ್ಸವ ಏರ್ಪಡಿಸಲಾಗುತ್ತಿದೆ. ಈ ವೇಳೆ ರಾಜ್ಯದ ಮತ್ತು ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರಿಗೆ ಹರಕೆ ಸಲ್ಲಿಸಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
Hindu Temple – ಅದ್ದೂರಿಯಾಗಿ ನಡೆಯಲಿದೆ ಬ್ರಹ್ಮರಥೋತ್ಸವ ಹಾಗೂ ಹೂವಿನ ಪಲ್ಲಕಿ
ಪ್ರತಿ ವರ್ಷದಂತೆ ಈ ವರ್ಷದ ಮಾಘ ಮಾಸದಲ್ಲಿ ಈ ಜಾತ್ರಾ ಮಹೋತ್ಸವ ನಡೆಯಲಿದೆ. 14 ದಿನಗಳ ಕಾಲ ನಡೆಯುವ ಜಾತ್ರೆ ಮಹೋತ್ಸವಕ್ಕೆ ರಾಜ್ಯ ಹಾಗೂ ಹೆಚ್ಚಾಗಿ ಆಂದ್ರಪ್ರದೇಶದ ಹಿಂದೂಪುರ ಭಕ್ತಾದಿಗಳು, ಹೊರ ರಾಜ್ಯಗಳ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ದೇವರಪೂಜೆ, ಹರಕೆ, ಸಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಪ್ರತಿನಿತ್ಯ ಅನ್ನಧಾನ ನಡೆಯಲಿದ್ದು ಉಳಿದ ದಿನಗಳಲ್ಲಿ ಪ್ರತಿ ಭಾನುವಾರ ಅನ್ನ ಸಂತರ್ಪಣೆ ನೇರವೇರುತ್ತದೆ. ಫೆ. 16 ಬ್ರಹ್ಮರಥೋತ್ಸವ. ಫೆ. 17 ರಾತ್ರಿ ಹೂವಿನ ಪಲಕ್ಕಿ ಉತ್ಸವ ಹೀಗೆ ಪ್ರತಿ ದಿನ 14 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.
ಜಾತ್ರೆಗೆ ಹೋಗುವ ಸುಲಭ ಮಾರ್ಗ
ಇನ್ನೂ ಈ ಕ್ಷೇತ್ರಕ್ಕೆ ತೆರಳಲು ಬೆಂಗಳೂರು-ಹೈದರಬಾದ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 7 ರಿಂದ ಬಾಗೇಪಲ್ಲಿ ಬಳಿಯ ಗ್ರೀನ್ ಪಾರ್ಕ್ ಹೋಟಲ್ ಬಳಿ ಎಡಕ್ಕೆ ಚಲಿಸಿದರೆ ಗೌರಿಬಿದನೂರು ರಸ್ತೆ ಮಾರ್ಗವಾಗಿ ಸಂಚರಿಸಿದರೆ ಎಲ್ಲೋಡು ಸಿಗುತ್ತದೆ. ಬೆಂಗಳೂರಿನಿಂದ 110 ಕಿ.ಮೀ, ಗುಡಿಬಂಡೆ ತಾಲೂಕು ಕ್ಷೇತ್ರದಿಂದ 7 ಕಿ.ಮೀ ದೂರದಲ್ಲಿದೆ. ಆಂದ್ರಪ್ರದೇಶದ ಹಿಂದೂಪುರದಿಂದ 30 ಕಿ.ಮೀ. ಜಿಲ್ಲಾ ಕೇಂದ್ರಿಂದ 52 ಕಿ.ಮೀ. ದೂರವಾಗುತ್ತದೆ.