Health Camp: ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ, ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಗುಡಿಬಂಡೆ ಯೂತ್ ಕಾಂಗ್ರೇಸ್ ಅಧ್ಯಕ್ಷ ಅಂಬರೀಶ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದೇವನಹಳ್ಳಿಯ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಹಿಂದುಳಿದ ಪ್ರದೇಶವಾದ ಗುಡಿಬಂಡೆಯಲ್ಲಿ ಸಾಕಷ್ಟು ಮಂದಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ ವಿವಿಧ ಸಂಘ ಸಂಸ್ಥೆಗಳು ಆಯೋಜನೆ ಮಾಡುವಂತಹ ಈ ರೀತಿಯ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಜನರು ಭಾಗವಹಿಸಬೇಕು. ಈ ಮೂಲಕ ತಮ್ಮ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇನ್ನೂ ಶಾಸಕರಾದ ಸುಬ್ಬಾರೆಡ್ಡಿಯವರು ಈ ಭಾಗದಲ್ಲಿ ಜನರಿಗೆ ಆರೋಗ್ಯ ಸಮಸ್ಯೆಗಳು ಎದುರಾಗಬಾರದೆಂಬ ದೃಷ್ಟಿಯಿಂದ ಈ ರೀತಿಯ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾರೆ ಎಂದರು.

ನಂತರ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಕೆ.ಟಿ.ನಂಜುಂಡಪ್ಪ ಮಾತನಾಡಿ, ಸುಮಾರು ವರ್ಷಗಳಿಂದ ದೇವನಹಳ್ಳಿಯ ಆಕಾಶ್ ಆಸ್ಪತ್ರೆ ಹಾಗೂ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರೋಗ್ಯ ಶಿಬಿರಗಳನ್ನು ಆಗಾಗ ಏರ್ಪಡಿಸುತ್ತಿರುತ್ತಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತದೆ. ಇಂದು ಸುಮಾರು ಮಂದಿ ತಮ್ಮ ಆರೋಗ್ಯ ಸಮಸ್ಯೆಗಳನ್ನು ವೈದ್ಯರ ಬಳಿ ತೋರಿಸಿದ್ದಾರೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ. ಇನ್ನೂ ಆರೋಗ್ಯವಂತರೂ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ಪರೀಕ್ಷೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ನಯಾಜ್ ಪಾಷ, ಪಪಂ ನಾಮನಿರ್ದೇಶಿತ ಸದಸ್ಯ ಆದಿನಾರಾಯಣಪ್ಪ, ಕಾಂಗ್ರೇಸ್ ಮುಖಂಡರು, ಆಕಾಶ್ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.