ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಹಾಸನಾಂಬೆ ದೇವಾಲಯದ (Hasanamba Temple) ವಾರ್ಷಿಕ ಜಾತ್ರೆಗೆ ದಿನಾಂಕ ನಿಗದಿಯಾಗಿದೆ. ಈ ವರ್ಷ ಅಕ್ಟೋಬರ್ 9 ರಿಂದ ಅಕ್ಟೋಬರ್ 23 ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ದೇವಿ ದರ್ಶನದ (Devi Darshana) ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
Hasanamba Temple : ಪಾಸ್ ವ್ಯವಸ್ಥೆ ರದ್ದು, ಗೋಲ್ಡ್ ಕಾರ್ಡ್ ಜಾರಿ
ಉತ್ಸವದ ಸಿದ್ಧತೆಗಳ ಕುರಿತು ಚರ್ಚಿಸಲು ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕರಾದ ಸ್ವರೂಪ್, ಸಿಮೆಂಟ್ ಮಂಜು, ಮತ್ತು ಶಿವಲಿಂಗೇಗೌಡರು ಭಾಗಿಯಾಗಿದ್ದರು. ಜನ ಸಾಮಾನ್ಯರಿಗೆ ಸುಗಮ ದರ್ಶನಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ವರ್ಷ ಪಾಸ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ನಿರ್ಧರಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ, ಉಚಿತ ಪಾಸ್ ವ್ಯವಸ್ಥೆ ಬದಲು ಗೋಲ್ಡ್ ಕಾರ್ಡ್ ಬಳಕೆಗೆ ಮಾತ್ರ ಅವಕಾಶವಿರುತ್ತದೆ. ಈ ಕುರಿತು ಮಾಹಿತಿ ನೀಡಿದ ದೇವಾಲಯದ ಆಡಳಿತ ಮಂಡಳಿ ಅಧಿಕಾರಿ ಮಾರುತಿ “ಒಂದು ಗೋಲ್ಡ್ ಕಾರ್ಡ್‌ಗೆ ಒಬ್ಬರಿಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಇದರಿಂದ ದರ್ಶನದ ವೇಳೆ ಉಂಟಾಗುತ್ತಿದ್ದ ಗೊಂದಲಗಳನ್ನು ತಪ್ಪಿಸಬಹುದು,” ಎಂದು ತಿಳಿಸಿದರು.
Hasanamba Temple – ಗಣ್ಯರಿಗೆ ಸಮಯ ನಿಗದಿ ಹಾಗೂ ಶಿಷ್ಟಾಚಾರಗಳಲ್ಲಿ ಕಡಿತ
ಸಭೆಯಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡರು, ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. “ವಿಐಪಿ, ವಿವಿಐಪಿ ದರ್ಶನಗಳಿಂದಾಗಿ ಸಾಮಾನ್ಯ ಭಕ್ತರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇದನ್ನು ತಪ್ಪಿಸಲು ಗಣ್ಯರ ದರ್ಶನಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಬೇಕು” ಎಂದು ಸಲಹೆ ನೀಡಿದರು.
- ಸಮಯ ನಿಗದಿ: ಗೋಲ್ಡ್ ಕಾರ್ಡ್ ದರ್ಶನಕ್ಕೆ ಮತ್ತು ಶಿಷ್ಟಾಚಾರದ ದರ್ಶನಕ್ಕೆ ತಲಾ ಎರಡು ಗಂಟೆಗಳ ಕಾಲಾವಕಾಶವನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ.
Read this also : ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ: ಮೃತ ವ್ಯಕ್ತಿಗಳ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?
- ಕೊನೆಯ ಐದು ದಿನಗಳು: ಉತ್ಸವದ ಕೊನೆಯ ಐದು ದಿನಗಳ ಕಾಲ ಯಾವುದೇ ರೀತಿಯ ಶಿಷ್ಟಾಚಾರ ದರ್ಶನಗಳಿಗೆ ಅವಕಾಶವಿರುವುದಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಮತ್ತು ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ, ಉಳಿದ ಎಲ್ಲಾ ಗಣ್ಯರು ಜಿಲ್ಲಾಡಳಿತ ನಿಯೋಜಿಸಿದ ವಾಹನಗಳನ್ನು ಮಾತ್ರ ಬಳಸಬೇಕು ಎಂದು ಮಾರುತಿ ಅವರು ತಿಳಿಸಿದರು.
ಹಾಸನಾಂಬೆ ಉತ್ಸವದ (Hasanamba Utsava) ಮೊದಲ ಮತ್ತು ಕೊನೆಯ ದಿನ ಹೊರತುಪಡಿಸಿ, ಉಳಿದ 13 ದಿನಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಈ ಬಾರಿ ಬೆಳಿಗ್ಗೆ 5 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗುವುದು. ಈ ಎಲ್ಲಾ ಬದಲಾವಣೆಗಳು ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ವ್ಯವಸ್ಥಿತ ಮತ್ತು ಜನಸ್ನೇಹಿಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ಆಡಳಿತ ಮಂಡಳಿ ತಿಳಿಸಿದೆ.