Grama Sangama – ಇಂದಿನ ಕಾಲದಲ್ಲಿ ಮೊಬೈಲ್, ಇಂಟರ್ ನೆಟ್ ಮೂಲಕ ಬಹಳಷ್ಟು ಮಕ್ಕಳು ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಟ್ಟು, ಧಾರ್ಮಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದಲು ನೀಡಬೇಕು ಎಂದು ಚಿಕ್ಕಬಳ್ಳಾಪುರದ ಕಳವಾರ ಓಂಕಾರ ಜ್ಯೋತಿ ಆಶ್ರಮದ ಉಮಾಮಹೇಶ್ವರ ಸ್ವಾಮೀಜಿಗಳು ಸಲಹೆ ನೀಡಿದರು.

ತಾಲೂಕಿನ ವರ್ಲಕೊಂಡ ಗ್ರಾಮದ ಎನ್.ಎಸ್.ಕಲ್ಯಾಣ ಮಂಟಪದಲ್ಲಿ ಜನಕಲ್ಯಾಣ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸಂಗಮ ಕಾರ್ಯಕ್ರಮವನ್ನು (Grama Sangama) ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳನ್ನು ನಾವು ಸುಸಂಸ್ಕೃತರನ್ನಾಗಿ ಬೆಳೆಸುವುದು ಅತ್ಯಂತ ಪ್ರಮುಖವಾದುದಾಗಿದೆ. ಬಾಲ್ಯದಲ್ಲಿ ಮಕ್ಕಳು ತಪ್ಪು ಮಾಡುವುದು ಸಹಜ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕಾದ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕಿದೆ. ಅದರಲ್ಲೂ ಇತ್ತೀಚಿಗೆ ಹೆಚ್ಚಾಗಿ ಮಕ್ಕಳು ಮೊಬೈಲ್ ಗಳ ದಾಸರಾಗುತ್ತಿದ್ದಾರೆ. ಕೆಲವೊಂದು ಕಡೆ ಪೋಷಕರೇ ಮಕ್ಕಳಿಗೆ ಮೊಬೈಲ್ ಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಹಾಳಾಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊಬೈಲ್ ಗಳಲ್ಲಿನ ಕೆಟ್ಟ ವಿಚಾರಗಳಿಗೆ ಮಕ್ಕಳು ಬೇಗ ಆಕರ್ಷಿತರಾಗುತ್ತಾರೆ. ಆದ್ದರಿಂದ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಬಿಟ್ಟು ರಾಮಾಯಣ, ಮಹಾಭಾರತ ಗ್ರಂಥಗಳನ್ನು ಕೊಟ್ಟು ಓದಿಸಬೇಕು. ಜೊತೆಗೆ ಮಕ್ಕಳಿಗೆ ದೇಶಕ್ಕಾಗಿ ಪ್ರಾಣ ಕೊಟ್ಟಂತಹ ಮಹನೀಯರ ಬಗ್ಗೆ ಹೇಳಬೇಕು. ಈ ನಿಟ್ಟಿನಲ್ಲಿ ಗ್ರಾಮ ವಿಕಾಸ ಸಂಸ್ಥೆ ಗ್ರಾಮಗಳಲ್ಲಿ ಬಾಲ ಸಂಗಮ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಅವರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯವಾದ ವಿಚಾರ ಎಂದರು.

ಬಳಿಕ ಆರ್.ಆರ್.ಎಸ್ ಸಂಘಟನೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕರಾದ ಗುರುಪ್ರಸಾದ್ ಮಾತನಾಡಿ, ಇಂದಿನ ಆಧುನಿಕ ಕಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ಕುಲಕಸಬುಗಳು ಅವನತಿಯತ್ತ ಸಾಗುತ್ತಿದೆ. ಜನರು ಗ್ರಾಮೀಣ ಭಾಗಗಳನ್ನು ತೊರೆದು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಭೂ ಸಂಪತ್ತು, ಗೋ ಸಂಪತ್ತು, ನೇಸರ ಸಂಪತ್ತು, ಜನ ಸಂಪತ್ತು, ಪರಿಸರ ಸಂರಕ್ಷಣೆ ಎಲ್ಲವೂ ಮರೆಯಾಗುತ್ತಿವೆ. ಇವೆಲ್ಲವನ್ನೂ ನಾವು ಕಾಪಾಡಬೇಕಿದೆ. ಜೊತೆಗೆ ಗೋ ಆಧಾರಿತ ಕೃಷಿಯನ್ನು ಮರೆತು ನಾವು ರಾಸಾಯನಿಕ ಕೃಷಿಯನ್ನು ಅನುಸರಿಸುತ್ತಿದ್ದೇವೆ. ಇದರಿಂದ ನಮ್ಮ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಈ ಎಲ್ಲವುಗಳನ್ನು ಗ್ರಾಮ ವಿಕಾಸ ಯೋಜನೆಯ ಮೂಲಕ ಬದಲಿಸಬೇಕಿದೆ. ಇನ್ನೂ ಗ್ರಾಮ ವಿಕಾಸ ಕೇಂದ್ರಗಳ ಮೂಲಕ ಗ್ರಾಮಘಳಲ್ಲಿ ಸಂಘಟನೆ, ಸಂಸ್ಕೃತಿಯನ್ನು ಬೆಳೆಸುವಂತಹ ಕೆಲಸ ಮಾಡಲಾಗುತ್ತಿರುವುದು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಗೋ ಆಧಾರಿತ ಸಾವಯವ ಕೃಷಿ, ಗ್ರಾಮ ಸುರಕ್ಷೆ, ಸಾಮಾಜಿಕ ಶಿಕ್ಷಣ ಮತ್ತು ಸಂಸ್ಕಾರ, ಸಾಮಾಜಿಕ ಆರೋಗ್ಯ, ಸಾಮಾಜಿಕ ಸ್ವಾವಲಂಬನೆ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನುರಿತ ತಜ್ಞರಿಂದ ಅರಿವು ಮೂಡಿಸಲಾಯಿತು. ಇನ್ನೂ ಕಾರ್ಯಕ್ರಮಕ್ಕೂ ಮುನ್ನಾ ಗ್ರಾಮ ವಿಕಾಸ ಯೋಜನೆಯ ವತಿಯಿಂದ ಪುನಃಶ್ಚೇತನಗೊಂಡ ಪಂಚಕಲ್ಯಾಣಿಗಳ ಹಾಗೂ ಚಿತ್ರಾವತಿ ಮತ್ತು ಕುಶಾವತಿ ನದಿ ಜಲದಿಂದ ವರ್ಲಕೊಂಡ ಆಂಜನೇಯಸ್ವಾಮಿಗೆ ಅಭಿಷೇಕ ಮಾಡುವುದರ ಮೂಲಕ ಕಲ್ಯಾಣಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಬಳಿಕ ಗೋಪೂಜೆ, ಭಾರತಾಂಬೆಗೆ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಶೈಲಿಯಂತೆ ರಾಶಿಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯಿತು.
ಈ ವೇಳೆ ಜನಕಲ್ಯಾಣ ಟ್ರಸ್ಟ್ ನ ಅಧ್ಯಕ್ಷ ಎನ್.ಎಸ್.ನಾಗೇಂದ್ರ ಪ್ರಸಾದ್, ಗ್ರಾಮ ವಿಕಾಸ ಯೋಜನೆಯ ಶ್ರೀಧರ್ ಸಾಗರ್ ಜೀ, ಯೂತ್ ಫಾರ್ ಸೇವಾ ಸಂಸ್ಥೆಯ ಸಂಸ್ಥಾಪಕರಾದ ವೆಂಕಟೇಶ್ ಮೂರ್ತಿ, ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಎಂ.ಎಸ್.ವೆಂಕಟೇಶ್, ಆರ್.ಎಸ್.ಎಸ್ ಮಹಾನಗರ ಸಂಚಾಲಕ ಮಿಲಿಂದ ಗೋಖಲೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಡಾ.ತಿಪ್ಪೇಸ್ವಾಮಿ, ಆರ್.ಎಸ್.ಎಸ್ ನ ಕೋಲಾರ ವಿಭಾಗದ ವಿಜಯ್ ಕುಮಾರ್, ಯೂತ್ ಫಾರ್ ಸೇವಾ ಸಂಸ್ಥೆಯ ಪರಿಸರ ಸಂಯೋಜಕ ಉಮಾಪತಿ ಭಟ್, ರಾಜ್ಯ ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಆನಂದ್, ಗ್ರಾಮ ವಿಕಾಸ ಕೇಂದ್ರಗಳ ಸುರೇಶ್, ದಯಾನಂದ್, ಅರ್ಷಿತಾ, ಮುನಿರಾಜು, ವೆಂಕಟೇಶ್ ಸೇರಿದಂತೆ ಅನೇಕರು ಹಾಜರಿದ್ದರು.