ಬಾಗೇಪಲ್ಲಿ: ಪಟ್ಟಣದ ಪ್ರಸಿದ್ದ ಗ್ರಾಮದೇವತೆ ಗಂಗಮ್ಮದೇವಿಯ 35ನೇ ವರ್ಷದ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ ಶನಿವಾರ ಅತ್ಯಂತ ಅದ್ದೂರಿಯಾಗಿ, ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಗಂಗಮ್ಮ ಕರಗ ಮಹೋತ್ಸದ ಹಿನ್ನಲೆಯಲ್ಲಿ ಹೂವಿನ ಕರಗ ಹೊತ್ತ ಮೇಲೂರು ವಹ್ನಿಕುಲ ಧರ್ಮಶ್ ಮತ್ತು ಅವರ ತಂಡದ ವೀರಕುಮಾರರು ಗಂಗಮ್ಮ ದೇವಿಯ ದೇವಾಲಯದಲ್ಲಿ ದೇವಿಗೆ ವಿಷೇಶ ಪೂಜೆಗಳನ್ನು ನೆರವೇರಿಸಿ, ದೇವಾಲಯದ ಪ್ರಾಂಗಣವನ್ನು ಮೂರು ಸಲ ಪ್ರದಕ್ಷಿಣೆ ಮಾಡಿ ದೇವಾಲಯದಿಂದ ಕರಗ ಹೊರಬರುತ್ತಿದ್ದಂತೆ ದೇವಾಲಯದ ಬಳಿ ನೆರೆದಿದ್ದ ಸಾವಿರಾರು ಭಕ್ತರು ಗೋವಿಂದ ಗೋವಿಂದ ಕೂಗುತ್ತಾ ಕರಗಕ್ಕೆ ಮಲ್ಲಿಗೆ ಹೂವು ಚೆಲ್ಲಿ ಸಂಭ್ರಮಿಸಿದರು.
ನಂತರ ಪಟ್ಟಣದ ವಿವಿಧ ಕಡೆಗಳಲ್ಲಿ ಏರ್ಪಡಿಸಲಾಗಿದ್ದ ವಿವಿಧ ಮನರಂಜನಾ ಕಾರ್ಯಕ್ರಮಗಳ ಬಳಿ ನಾನಾ ಭಂಗಿಗಳಲ್ಲಿ ತಾಳೆಕ್ಕೆ ತಕ್ಕಂತೆ ಕುಣಿದು ಅಲ್ಲಿ ನೆರೆದಿದ್ದ ಸಾವಿರಾರು ಭಕ್ತರನ್ನು ರಂಜಿಸಿದರಲ್ಲದೆ ಪಟ್ಟಣದ ಎಲ್ಲಾ 23 ವಾರ್ಡ್‍ಗಳಲ್ಲಿ ಸಂಚರಿಸಿ ಧರ್ಮರಾಯ ಸ್ವಾಮಿ ಕರಗವನ್ನು ಭಕ್ತರಿಗೆ ದರ್ಶನ ನೀಡಿದರು. ಇಡೀ ರಾತ್ರಿಯಿಂದ ಬೆಳಗಿನ ಜಾವದವರೆಗೆ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ತಮಟೆ ವಾದ್ಯಗಳೊಂದಿಗೆ ಕರಗ ತೆರಳಿದ ಸಂದರ್ಭದಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಗಳ ಮುಂದೆ ರಂಗೊಲಿ ಬಿಡಿಸಿ ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ವರ್ಷದ ಧರ್ಮರಾಯಸ್ವಾಮಿ ಹೂವಿನ ಕರಗವನ್ನು ಕಣ್ತುಂಬಿಸಿಕೊಳ್ಳಲು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು.
ಕರಗ ಮಹೋತ್ಸವದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು ಅಲ್ಲದೆ ನೆರೆದಿದ್ದ ಭಕ್ತ ಸಮೂಹಕ್ಕೆ ಅನ್ನದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕರಗ ಮಹೋತ್ಸವದ ಅಂಗವಾಗಿ ಗಂಗಮ್ಮ ದೇವಿ ದೇವಾಲಯ ಸೇರಿದಂತೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಪಟ್ಟಣದ ಗ್ರಾಮ ದೇವತೆ ಗಂಗಮ್ಮ ದೇವಾಲಯದಲ್ಲಿ ವಿಷೇಶ ಪೂಜೆ ಸಲ್ಲಿಸಿ ನಂತರ ಹೂವಿನ ಕರಗ ಮಹೋತ್ಸವದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭಾಗಿಯಾಗಿದ್ದರು.