ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಆ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಭೇಟಿಯಾದ ರೇವಣ್ಣ ಅವರೊಂದಿಗೆ ಮಾತುಕತೆ ನಡೆಸಿದರು. ಬಂಧನದಿಂದ ಜಾಮೀನು ಬಳಿಕ ಅವರು ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ತಾನು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಭಕ್ತ. ಸದಾ ಸ್ವಾಮಿಯ ದರ್ಶನಕ್ಕೆ ಬರುತ್ತಿರುತ್ತೇನೆ. ಆದ್ದರಿಂದ ಇಂದೂ ಕೂಡಾ ಬಂದಿದ್ದೇನೆ. ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. 25 ವರ್ಷಗಳ ಕಾಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಾನೂನು ಬಗ್ಗೆ ಗೌರವವಿದೆ. ದೇವರ ಬಗ್ಗೆಯೂ ನಂಬಿಕೆಯಿದೆ. ಪ್ರಕರಣ ಕೋರ್ಟ್ ನಲ್ಲಿರುವುದರಿಂದ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ. ರಾಜ್ಯದ ಜನತೆ ಬಗ್ಗೆ, ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದರು.
ಹಾಸನ ಚಲೋ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ದೇವೆಗೌಡರು ಪತ್ರ ಬರೆದಿರೋ ಬಗ್ಗೆಯೂ ಗೊತ್ತಿಲ್ಲ. ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಲ್ಲಿಂದ ಅವರು ತೆರಳಿದ್ದಾರೆ. ಕಳೆದ ಭಾನುವಾರ (ಮೇ 26) ರಾತ್ರಿಯೇ ಧರ್ಮಸ್ಥಳಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಈಗಾಗಲೇ ಹಲವು ಪ್ರಮುಖ ದೇವಸ್ಥಾನಗಳಿಗೆ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.