ಕಳೆದೆರಡು ದಿನಗಳ ಹಿಂದೆ ನಡೆದ ಪಿ.ಎಲ್.ಡಿ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಹುತೇಕ ಎಲ್ಲಾ ರೈತರು ಹಾಗೂ ಷೇರುದಾರರು ಸಭೆಯನ್ನು ಬಹಿಷ್ಕರಿಸಲಾಗಿತ್ತು. ಬಳಿಕ ಪಿ.ಎಲ್.ಡಿ. ಬ್ಯಾಂಕ್ ಆಡಳಿತ ಮಂಡಳಿ ರೈತರನ್ನು ಕಿಡಿಗೇಡಿಗಳು ಎಂದು ಸಂಭೋಧಿಸಿದ್ದಾರೆ. ರೈತರನ್ನು ಈ ರೀತಿಯಾಗಿ ಅವಹೇಳನ ಮಾಡಿರುವ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಆಗ್ರಹಿಸಿದರು.
ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ), ಸಿಪಿಎಂ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಡಿ.ವೈ.ಎಫ್.ಐ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆ ಪಿ.ಎಲ್.ಡಿ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆ ನಡೆದಿತ್ತು. ಸಭೆಯಲ್ಲಿ ಷೇರುದಾರರು ಕೆಲವೊಂದು ಕಾರಣಗಳಿಂದ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದರು. ಮತದಾನ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳ ಕಾರಣಗಳಿಂದ ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡಿದ್ದೆವು. ಆಡಳಿತ ಮಂಡಳಿ ಹಾಗೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಷ ಹೊರಹಾಕಿದ್ದೆವು. ಈ ಕಾರಣದಿಂದ ಆಡಳಿತ ಮಂಡಳಿ ಪತ್ರಿಕಾಗೋಷ್ಟಿಯನ್ನು ನಡೆಸಿ ಕಿಡಿಗೇಡಿಗಳು ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿ, ರೈತರಿಗೆ ಅವಮಾನ ಮಾಡಿದ್ದಾರೆ. ಇದು ರೈತರಿಗೆ ಮಾಡಿದ ಘೋರ ಅವಮಾನವಾಗಿದೆ. ಕೂಡಲೇ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿ ರೈತರಲ್ಲಿ ಕ್ಷಮೆ ಕೇಳಬೇಕು. ಜೊತೆಗೆ ಅಧಿಕಾರಿಗಳು ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂಬಂಧ ಸೆ.18 ರಂದು ಪಿ.ಎಲ್.ಡಿ ಬ್ಯಾಂಕ್ ಮುಂಭಾಗ ಪ್ರತಿಭಟನೆಯನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದರು.
ಬಳಿಕ ಪ.ಪಂ ಮಾಜಿ ಅಧ್ಯಕ್ಷ ದ್ವಾರಕನಾಥನಾಯ್ಡು ಮಾತನಾಡಿ, ಪಿ.ಎಲ್.ಡಿ ಬ್ಯಾಂಕ್ ನಲ್ಲಿ ರೈತರಿಗೆ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಷೇರುದಾರರಿದ್ದಾರೆ. ಆದರೆ ಕೆಲವೊಂದು ನಿಯಮಾವಳಿಗಳನ್ನು ಜಾರಿ ಮಾಡಿ ಷೇರುದಾರರಿಂದ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಅರ್ಹ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಸುಮಾರು ವರ್ಷಗಳಿಂದಲೂ 1200 ಮಂದಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಉಳಿದವರು ಷೇರುದಾರರಲ್ಲವೇ, ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೂ ಸಹ ಸಾಲ ನೀಡುತ್ತಿಲ್ಲ. ಬ್ಯಾಂಕ್ ನಲ್ಲಿ ವ್ಯವಹಾರ ಮಾಡಿದರೇ ಮಾತ್ರ ಮತದಾನದ ಹಕ್ಕು ಎಂದು ಹೇಳುತ್ತಾರೆ. ಸಾಲವೇ ನೀಡೊಲ್ಲ ಅಂದಾಗ ನಾವು ಹೇಗೆ ವ್ಯವಹಾರ ಮಾಡೋದು. ಬೇಕು ಅಂತಲೇ ಈ ರೀತಿ ಮಾಡುತ್ತಿದ್ದಾರೆ. ಈ ಸಂಬಂಧ ಪ್ರತಿಭಟಿಸಿದರೇ ನಮ್ಮನ್ನು ಕಿಡಿಗೇಡಿಗಳು ಅಂತಾ ಹೇಳ್ತಾರೆ. ಕೂಡಲೇ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿ ಕ್ಷಮೆ ಕೇಳಬೇಕು. ಅವರ ವಿರುದ್ದ ಸಹಾಕರ ನಿಬಂಧಕರಲ್ಲಿ ದಾವೆ ಸಹ ಹೂಡುತ್ತೇವೆ ಎಂದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್, ಡಿ.ವೈ.ಎಫ್.ಐ ಮುಖಂಡ ಶ್ರೀನಿವಾಸ್, ರಮಣ, ರೈತ ಮುಖಂಡರಾದ ವೆಂಕಟೇಶಪ್ಪ, ವೆಂಕಟರಮಣಪ್ಪ ಸೇರಿದಂತೆ ಹಲವರು ಇದ್ದರು.