ಬಾಗೇಪಲ್ಲಿ: ತಾಲೂಕಿನ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳನ್ನು ಸಮರ್ಪಕವಾಗಿ ವಿತರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಹಾಗೂ ರೈತ ಮುಖಂಡರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು ಕಳೆದ ವರ್ಷ ಮಳೆ ಅಭಾವದಿಂದ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೆ ತಾಲೂಕಿನ ಯಾವುದೇ ರೈತರಿಗೂ ಬೆಳೆ ಕೈಗೆ ಸಿಕ್ಕಿಲ್ಲ, ಈ ವರ್ಷದಲ್ಲಿ ಮುಂಗಾರಿಗೂ ಮುನ್ನವೇ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ ಈ ನಿಟ್ಟಿನಲ್ಲಿ ರಾಗಿ, ಮುಸಕಿನ ಜೋಳ, ಅಲಸಂಧಿ, ಶೇಂಗಾ ಇತ್ಯಾಧಿ ಉತ್ತಮ ಗುಣಮಟ್ಟದ ಭಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳನ್ನು ರೈತರ ಅಗತ್ಯದ ಅನುಸಾರವಾಗಿ ಪೂರೈಸುವಂತೆ ಮನವಿ ಮಾಡಿದರು.
ರೈತರಿಗೆ ವಿತರಿಸುವ ಬಿತ್ತನೆ ಬೀಜ ಗುಣಮಟ್ಟವನ್ನು ಪರೀಕ್ಷೆ ಮಾಡಿ ವಿತರಿಸಿ ಒಂದು ವೇಳೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಯಾಗಿ ಬೆಳೆ ನಾಶವಾದರೆ, ಉತ್ತಮ ಇಳುವರಿ ಬರದಿದ್ದರೆ ಬಿತ್ತನೆ ಬೀಜ ವಿತರಿಸಿದ ಇಲಾಖೆ ಅಧಿಕಾರಿಗಳು ಹಾಗೂ ಬಿತ್ತನೆ ಬೀಜ ಪೂರೈಸಿರುವ ಕಂಪನಿಗಳೇ ನೇರ ಹೊಣೆಗಾರರನ್ನಾಗಿಸಿ ಅವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದರು. ಈ ವೇಳೆ ರೈತ ಸಂಘದ ಮುಖಂಡರು ಹಾಗೂ ರೈತರು ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.