Exam – ಸರ್ಕಾರಿ ಹುದ್ದೆಗಳನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಅಗತ್ಯವಾಗಿದ್ದು, ಈ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳುವುದು ತುಂಬಾ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ರವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುತೇಕ ವಿದ್ಯಾರ್ಥಿಗಳಿಗೆ ಸರ್ಕಾರಿ ಹುದ್ದೆಗಳನ್ನು ಪಡೆಯುವುದು, ಸೇವೆ ಮಾಡುವುದು ಗುರಿಯಾಗಿರುತ್ತದೆ. ಈ ಗುರಿ ಸಾಧನೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟವೂ ಅಲ್ಲ, ಸುಲಭವೂ ಅಲ್ಲ. ಓದುವಾಗ, ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಶಿಸ್ತನ್ನು ರೂಡಿಸಿಕೊಂಡು ತಯಾರಿ ನಡೆಸಿದ್ದೇ ಆದ್ದಲ್ಲಿ ಯಶಸ್ಸು ನಿಮ್ಮ ಅಂಗೈಯಲ್ಲಿರುತ್ತದೆ. ಆದರೆ ನಾನು ಪರೀಕ್ಷೆ ಬರೆಯಬಹುದೇ, ನನ್ನಲ್ಲಿ ಅಂತಹ ಸಾಮರ್ಥ್ಯ ಇದೆಯಾ ಎಂಬುದರ ಬಗ್ಗೆ ಯೋಚನೆ ಮಾಡುವಂತಹವರೆ ಹೆಚ್ಚಾಗಿದ್ದಾರೆ. ಈ ಭಾವನೆಯನ್ನು ತೊಡೆದು ಹಾಕಿ, ಯೋಗಾ, ಧ್ಯಾನ ಮಾಡುವ ಮೂಲಕ ಶಿಸ್ತು ಪಾಲನೆ ಮಾಡುವ ಮೂಲಕ ತಾವು ಸಾಧನೆ ಮಾಡಬಹುದು ಎಂದು ತಾವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಿದ್ದು ಎಂಬ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಬಳಿಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಫ್ಜಲ್ ಬಿಜಿಲಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧನೆ ಮಾಡಿದಂತಹ ಸಾಧಕರನ್ನು ಮಾರ್ಗದರ್ಶಕರಾಗಿ ತೆಗೆದುಕೊಳ್ಳಬೇಕು. ಅವರು ಯಾವ ರೀತಿ ಪರೀಕ್ಷೆಯನ್ನು ಎದುರಿಸಿದ್ದರು. ಹೇಗೆ ತಯಾರಿ ನಡೆಸಬೇಕು ಎಂಬೆಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳಾದ ತಾವು ನಿಂತ ನೀರಾಗಬಾರದು, ಹರಿಯುವಂತಹ ನೀರಾಗಬೇಕು. ಈ ನಿಟ್ಟಿನಲ್ಲಿ ತಮ್ಮಲ್ಲಿನ ಭಯ, ಸಂಕೋಚ ಎಲ್ಲವನ್ನೂ ಬಿಟ್ಟು ಓದಿದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ಕಾರ್ಯಾಗಾರಗಳಲ್ಲಿ ತಾವು ಹೆಚ್ಚಾಗಿ ಭಾಗಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಭರತ ಸ್ವಯಂ ಸೇವಾ ಸಂಘದ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಸುಪ್ರಿಯಾ ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ತಿಳಿಸಿಕೊಟ್ಟರು. ಈ ಸಮಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರೊ.ಕೃಷ್ಣಪ್ಪ, ಡಾ.ನಯಾಜ್, ಪ್ರಭಾಕರ್, ಶ್ರೀನಾಥ್, ನರಸಿಂಹಮೂರ್ತಿ, ಜಿಲ್ಲಾ ವಿಕಲಚೇತನ ಪುನರ್ ವಸತಿಯ ಸಂತೋಷ್, ನೋಡಲ್ ಅಧಿಕಾರಿ ಗಣೇಶ್ ಸೇರಿದಂತೆ ಹಲವರು ಹಾಜರಿದ್ದರು.