ಅ.17 ರಂದು ಆಚರಣೆ ಮಾಡುವ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು (Valmiki Jayanthi) ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಮುದಾಯ ಮುಖಂಡರ ಸಮ್ಮುಖದಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಪ್ರತಿ ವರ್ಷದಂತೆ ಈ ಬಾರಿಯೂ ರಾಮಾಯಣ ರಚಿಸಿಕೊಟ್ಟಂತಹ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತಿಯಿಂದ ಒಂದು ಪಲ್ಲಕಿ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗುವುದ ಹಾಗೂ ವೇದಿಕೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದವರು, ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೇ ಭಾಗವಹಿಸಬೇಕಾಗಿ ಮನವಿ ಮಾಡಿದರು.
ಬಳಿಕ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ಗಂಗಾಧರ್ ಮಾತನಾಡಿ, ಕಳೆದ ಬಾರಿಯೂ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ನೆರವೇರಿತ್ತು. ಈ ಬಾರಿಯೂ ಸಹ ಅಧಿಕಾರಿಗಳು ಹಾಗೂ ಸಮುದಾಯದ ಎಲ್ಲಾ ಮುಖಂಡರ ಸಹಕಾರದೊಂದಿಗೆ ಜಯಂತಿ ಅದ್ದೂರಿಯಾಗಿ ನಡೆಯಲಿದೆ. ಈಗಾಗಲೇ ಸರ್ಕಾರದಿಂದ ವಾಲ್ಮೀಕಿ ಭವನ ನಿರ್ಮಾಣಕ್ಕೆ 50 ಗುಂಟೆ ಜಮೀನು ನೀಡಲಾಗಿದೆ. 2 ಕೋಟಿ ಅನುದಾನಕ್ಕೂ ಅಧಿಕಾರಿಗಳು ಮನವಿ ಸಲ್ಲಿಸಲಾಗಿದೆ. ಎಲ್ಲಾ ಸಮುದಾಯದ ಮುಖಂಡರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕು. ಜೊತೆಗೆ ವೇದಿಕೆ ಕಾರ್ಯಕ್ರಮ ಶಿಸ್ತುಬದ್ದವಾಗಿ ನಡೆಯಲು ಅಧಿಕಾರಿಗಳು ಹಾಗೂ ಮುಖಂಡರು ಸಹಕಾರ ನೀಡಬೇಕು ಎಂದರು.
ಬಳಿಕ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ ಮಾತನಾಡಿ, ವಾಲ್ಮೀಕಿ ಭವನಕ್ಕೆ ಪಟ್ಟಣದ ಪ್ರವಾಸಿ ಮಂದಿರದ ಬಳಿ 50 ಗುಂಟೆ ಜಮೀನು ಮಂಜೂರಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಭವನ ನಿರ್ಮಾಣಕ್ಕೆ 2 ಕೋಟಿ ಅನುದಾನಕ್ಕಾಗಿ ಮನವಿಯನ್ನು ಸಹ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮುಂದಿನ ಎರಡು ತಿಂಗಳ ಒಳಗಾಗಿ ಅನುದಾನ ಸಹ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಸಭೆಯಲ್ಲಿ ತಿಳಿಸಿದರು. ಈ ಸಮಯದಲ್ಲಿ ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಮುನಿಕೃಷ್ಣ, ಕೃಷ್ಣಪ್ಪ, ಪ.ಪಂ ಅಧ್ಯಕ್ಷ ವಿಕಾಸ್, ವಾಲ್ಮೀಕಿ ಸಮುದಾಯದ ರಾಮಾಂಜಿ, ಹರಿಕೃಷ್ಣ, ಶ್ರೀನಿವಾಸ್, ಮಂಜುನಾಥ್, ಆನಂದಪ್ಪ, ಅಂಜಿನಪ್ಪ, ನಿತಿನ್, ನರೇಂದ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.