Dalits Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಮಂಜೂರಾದ ಜಮೀನಿನಲ್ಲೇ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳು ಅಂಬೇಡ್ಕರ್ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದರು.
ಈ ವೇಳೆ ಕಡೇಹಳ್ಳಿ ಗ್ರಾಮಸ್ಥ ಹಾಗೂ ದಲಿತ ಮುಖಂಡ ಆರ್.ಕದಿರಪ್ಪ ಮಾತನಾಡಿ, ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಅನೇಕರು ಮನೆಗಳನ್ನು ಕಳೆದುಕೊಂಡಿದ್ದರು. ಅವರ ಪೈಕಿ ಹೆಚ್ಚು ದಲಿತರೇ ಇದ್ದಾರೆ. ಬಳಿಕ ಮನೆ ಕಳೆದುಕೊಂಡವರಿಗಾಗಿ ಕಡೇಹಳ್ಳಿ ಗ್ರಾಮದ ಸ.ನಂ. 131 ರಲ್ಲಿ 2 ಎಕರೆ 15 ಗುಂಟೆ ಜಮೀನಿನಲ್ಲಿ ನಿವೇಶನ ನೀಡಲು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು. ಆದರೆ ಈ ಜಾಗದಲ್ಲಿ ಓಬನ್ನಗಾರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ನಮೂನೆ 57 ರಲ್ಲಿ ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಜೊತೆಗೆ ಈ ಜಾಗವನ್ನು ಯಾರೂ ಅತಿಕ್ರಮಣ ಮಾಡಬಾರದೆಂದು ನಾಮಫಲಕ ಸಹ ಅಳವಡಿಸಿದ್ದಾರೆ. ಆದರೂ ಸಹ ಓಬನ್ನಗಾರಹಳ್ಳಿಯ ವ್ಯಕ್ತಿ ಬಂದು ಉಳುಮೆ ಮಾಡಲು ಮುಂದಾಗಿದ್ದಾರೆ. ಆದ್ದರಿಂದ ಕಡೇಹಳ್ಳಿ ಗ್ರಾಮಸ್ಥರಾದ ನಾವುಗಳು ನಮಗೆ ನಿವೇಶನ ನೀಡಲು ಮಂಜೂರು ಮಾಡಿದ ಜಮೀನಿನಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದೇವೆ. ನಮಗೆ ನಿವೇಶನ ನೀಡುವ ತನಕ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಳಿಕ ತಾ.ಪಂ. ಮಾಜಿ ಸದಸ್ಯ ಹಂಪಸಂದ್ರ ಆದಿನಾರಾಯಣಪ್ಪ ಮಾತನಾಡಿ, ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣ ಮಾಡಿದ ಸಮಯದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಜಾಗ ಮಂಜೂರು ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಅಧಿಕಾರಿಗಳು ಮನೆ ಕಳೆದುಕೊಂಡವರಿಗೆ ನಿವೇಶನ ನೀಡಿಲ್ಲ. ಇನ್ನೂ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಹೇಳುತ್ತಾರೆ. ಯಾರು ಅತಿಕ್ರಮಣ ಮಾಡಬಾರದೆಂದು ತಹಸೀಲ್ದಾರರು ನಾಮಫಲಕ ಹಾಕುತ್ತಾರೆ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶ ಮಾಡಿ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಮಯದಲ್ಲಿ ಡಿ.ಎಸ್.ಎಸ್ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ಕಡೇಹಳ್ಳಿ ಗ್ರಾಮಸ್ಥರಿಗೆ ನಿವೇಶನ ನೀಡಲು ಜಾಗ ಮಂಜೂರಾಗಿದ್ದು, ಈ ಜಮೀನಿನ ಮೇಲೆ ತಡೆಯಾಜ್ಞೆ ತಂದಿರುವಂತಹವರಿಗೆ ಇದೇ ಸ.ನಂ ನಲ್ಲಿ ಮೂರು ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಆದರೂ ಸಹ ಬಡ ದಲಿತರಿಗೆ ನಿವೇಶನಗಳನ್ನು ನೀಡಲು ಮಂಜೂರು ಮಾಡಿಸಿದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜರೂರಾಗಿ ನಿವೇಶನಗಳನ್ನು ಹಂಚಿಕೆ ಮಾಡಬೇಕು ಅಲ್ಲಿಯವರೆಗೂ ಗುಡಿಸಲು ನಿರ್ಮಿಸಿ ಇಲ್ಲೇ ವಾಸ ಮಾಡುತ್ತೇವೆ ಎಂದರು.
ಇನ್ನು ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತರಾಗಿ ಗುಡಿಬಂಡೆ ಪೊಲೀಸರು ಸ್ಥಳಿದಲ್ಲಿದ್ದರು. ಈ ಸಮಯದಲ್ಲಿ ಕಡೇಹಳ್ಳಿ ಗ್ರಾಮಸ್ಥರಾದ ಆದಿನಾರಾಯಣಪ್ಪ, ಚಿಕ್ಕತಿಪ್ಪಣ್ಣ, ಗಂಗಪ್ಪ, ಜಿ.ನಾರಾಯಣಪ್ಪ, ಕೆ.ಎನ್.ಆದಿನಾರಾಯಣಪ್ಪ, ಆದಿಲಕ್ಷ್ಮಮ್ಮ, ರತ್ನಮ್ಮ, ನರಸಮ್ಮ, ಮುದ್ದುಗಂಗಮ್ಮ, ನಾರಾಯಣಮ್ಮ, ಲಕ್ಷ್ಮೀದೇವಮ್ಮ ಸೇರಿದಂತೆ ಹಲವರು ಇದ್ದರು.