ಕೆಲವು ದಿನಗಳ ಹಿಂದೆಯಷ್ಟೆ ಸಂಪತ್ತಿನ ಮರು ಹಂಚಿಕೆಯ ಬಗ್ಗೆ ವಿವಾದಿತ ಹೇಳಿಕೆ ನೀಡಿದಂತಹ ಸಾಗರೋತ್ತರ ಕಾಂಗ್ರೇಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಇದೀಗ ಮತ್ತೊಂದು ಹೇಳಿಕೆ ನೀಡಿದ ಸುದ್ದಿಯಾಗಿದ್ದಾರೆ. ಸಂಪತ್ತಿನ ಮರು ಹಂಚಿಕೆ ಕುರಿತಂತೆ ಹೇಳಿಕೆ ನೀಡಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ ಗೆ ಮುಜುಗರ ಉಂಟು ಮಾಡಿದಂತಹ ಪಿತ್ರೋಡಾ ಪೂರ್ವ ಭಾರತದ ಜನರು ಚೀನಿಯರಂತೆ, ದಕ್ಷಿಣ ಭಾರಯದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದರ ಜೊತೆಗೆ ಮಾತನಾಡಿದಂತಹ ಪಿತ್ರೋಡಾ ಭಾರತದಂತಹ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ನಾವೆಲ್ಲರೂ ಸಹೋದರ-ಸಹೋದರಿಯರಂತೆ ಜೀವನ ನಡೆಸುತ್ತಿದ್ದೇವೆ. ಭಾರತದ ಪಶ್ಚಿಮದ ಜನರು ಅರಬ್ಬರಂತೆ, ಪೂರ್ವದ ಜನರು ಚೀನಿಯರಂತೆ, ಉತ್ತರ ಭಾರತದವರು ಬಿಳಿಯರಂತೆ, ದಕ್ಷಿಣ ಭಾರತದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ. ಪ್ರಜಾಪ್ರಭುತ್ವ, ಭ್ರಾತೃತ್ವ, ಸ್ವತಂತ್ರ ಹಾಗೂ ಸ್ವಾತಂತ್ಯ್ರದಲ್ಲಿ ಬೇರೂರಿರುವ ಭಾರತದ ಮೂಲಭೂತ ತತ್ವಗಳು ಸದ್ಯ ಸವಾಲಿನಲ್ಲಿವೆ. ಭಾರತ ರಾಮನವಮಿ, ರಾಮ ಮಂದಿರದಿಂದ ಸವಾಲು ಎದುರಿಸುತ್ತಿದೆ. ಸದಾ ದೇವಾಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ಮೋದಿ ಓರ್ವ ಭಾರತೀಯ ನಾಯಕನಂತೆ ಮಾತನಾಡದೇ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಂತೆ ಮಾತನಾಡುತ್ತಾರೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಇನ್ನೂ ಸ್ಯಾಂ ಪಿತ್ರೋಡ ಕೆಲವು ದಿನಗಳ ಹಿಂದೆ ಸಂಪತ್ತಿನ ಮರು ಹಂಚಿಕೆ ಕುರಿತು ಹೇಳಿಕೆ ನೀಡಿ ಭಾರಿ ವಿವಾದ ಹುಟ್ಟಿಸಿದ್ದರು. ಕಾಂಗ್ರೇಸ್ ಪಕ್ಷ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಚುನಾವಣೆಯ ಸಮಯದಲ್ಲಿ ಪಿತ್ರೋಡಾ ನೀಡಿದ ಈ ಹೇಳಿಕೆಯ ಕಾರಣದಿಂದ ಕಾಂಗ್ರೇಸ್ ಪಕ್ಷ ಮುಜುಗರ ಪಡುವಂತಾಗಿತ್ತು. ಇದೀಗ ನಾಲ್ಕನೇ ಹಂತದ ಚುನಾವಣೆ ನಡೆಯುವ ಸಮಯದಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ವಿರೋಧ ಪಕ್ಷಗಳು ಭಾರಿ ಟೀಕೆ ಸಹ ಮಾಡುತ್ತಿವೆ.