ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ವಿರೋಧ ಪಕ್ಷಗಳಿಗೆ ಬಲವಾದ ಅಸ್ತ್ರವಾಗಿದೆ. ಈ ಪ್ರಕರಣದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರದ ಮೊದಲ ವಿಕೆಟ್ ಪತನ ಎಂದು ಹೇಳಲಾಗುತ್ತಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದೆ. ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ದಿವಂಗತ ಚಂದ್ರಶೇಖರ್ ರವರ ಡೆತ್ ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಂತೆ ಅವ್ಯವಹಾರ ನಡೆದಿದೆ ಎಂದು ಬರೆದಿದ್ದರು. ಈ ಪ್ರಕರಣವನ್ನು ಸಿಐಡಿ ನಡೆಸುತ್ತಿದ್ದು, ಹಲವರ ವಿರುದ್ದ ದೂರು ದಾಖಲಾಗಿದೆ. ಕೆಲ ಅಧಿಕಾರಿಗಳನ್ನು ಸಸ್ಪೆಂಡ್ ಸಹ ಮಾಡಲಾಗಿದೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೇಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಕೂಡಲೇ ಸಚಿವ ನಾಗೇಂದ್ರ ರವರ ರಾಜಿನಾಮೆ ಪಡೆಯಬೇಕು ಬಳಿಕ ಸಿಎಂ ಸಿದ್ದರಾಮಯ್ಯ ಸಹ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ಇನ್ನೂ ಈ ಸಂಬಂಧ ಮೇ.30 ಗುರುವಾರದಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಚಿವ ನಾಗೇಂದ್ರ ರಾಜಿನಾಮೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸರ್ಕಾರಕ್ಕೆ ಮುಖಭಂಗವಾಗಬಾರದು ಆದ್ದರಿಂದ ಬಿ.ನಾಗೇಂದ್ರ ರಾಜಿನಾಮೆ ನೀಡಿವುದು ಸೂಕ್ತ, ತನಿಖೆ ಪೂರ್ಣಗೊಂಡ ಬಲಿಕ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ತೀರ್ಮಾನ ಕೈಗೊಂಡರು. ಸಭೆಯ ಬಳಿಕ ಸಿದ್ದರಾಮಯ್ಯ ನಾಗೇಂದ್ರ ರವರಿಗೆ ಖುದ್ದು ತಾವೇ ಹೇಳಿಕೆ ನೀಡಿ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಪ್ರತಿಪಕ್ಷ ಬಿಜೆಪಿ ನಾಯಕರು ಸಚಿವ ನಾಗೇಂದ್ರ ರವರ ರಾಜಿನಾಮೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದೀಗ ಸಿದ್ದರಾಮಯ್ಯ ರವರು ನಾಗೇಂದ್ರ ರವರಿಗೆ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಸಚಿವ ರಾಜಿನಾಮೆ ನೀಡದೇ ಇದ್ದರೇ ಜೂ.6 ರಂದು ರಾಜ್ಯದಾಧ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಎಚ್ಚರಿಕೆ ಸಹ ನೀಡಿತ್ತು.