ಕರ್ನಾಟಕದ ಮೈಸೂರಿನಲ್ಲಿ ಜನಸ್ಪಂದನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೊಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ಸಮಯದಲ್ಲಿನ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನನಗೂ ಅಂತರ್ಜಾತಿ ವಿವಾಹವಾಗುವ ಆಸೆಯಿತ್ತು ಎಂದು ಹೇಳಿದ್ದಾರೆ. ಕಾನೂನು ಪದವಿ ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆಯಾಗಬೇಕು ಅಂದುಕೊಂಡಿದ್ದಾಗಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮೈಸೂರಿನ ಜನಸ್ಪಂದನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿದ್ದ ಅಂತರ್ಜಾರಿ ವಿವಾಹಿತರ ನೊಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿ ಜೀವನದಲ್ಲಿನ ಪ್ರೇಮಾಂಕುರದ ಬಗ್ಗೆ ತಿಳಿಸಿದ್ದಾರೆ. ನಾನು ಕಾನೂನು ಓದುತ್ತಿರುವಾಗ ಅಂತರ್ಜಾತಿ ವಿವಾಹವಾಗುವ ಆಸೆಯಿತ್ತು. ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆಯಾಗಬೇಕು ಎಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಮನೆಯವರೂ ಒಪ್ಪಲಿಲ್ಲ ಆದ್ದರಿಂದ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆಯಾಗಬೇಕಾಯ್ತು ಎಂದು ಕಾಲೇಜು ಜೀವನದ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ತಾವು ಕಾಲೇಜಿನ ದಿನಗಳಲ್ಲಿ ಹುಡುಗಿಯೊಬ್ಬಳನ್ನು ಇಷ್ಟಪಟ್ಟಿರುವುದನ್ನು ತಿಳಿಸಿದ್ದಾರೆ.
ಬಳಿಕ ಅಂತರ್ಜಾತಿ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಅಂಬೇಡ್ಕರ್ ಹಾಗೂ ಕುವೆಂಪು ರವರ ಆಶಯದಂತೆ ಸಮ ಸಮಾಜ ನಿರ್ಮಾಣವಾಗಲು ಅಂತರ್ಜಾತಿ ವಿವಾಹಗಳು ಹೆಚ್ಚಾಗಿ ನಡೆಯಬೇಕು. ಅಂತರ್ಜಾತಿ ವಿವಾಹಗಳಿಂದ ಜಾತಿ ನಾಶ ಸಾಧ್ಯ. ಅಂತರ್ಜಾತಿ ವಿವಾಹಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ಸರ್ಕಾರ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.