-
ಇಂದಿನ ಕಾಲದಲ್ಲಿ ವಿಮೆ (Insurance) ತುಂಬಾನೆ ಪ್ರಾಮುಖ್ಯತೆ ವಹಿಸಿದೆ ಎನ್ನಬಹುದು. ಇದೀಗ ಇನ್ಸುರೆನ್ಸ್ ಪಾಲಿಸಿ ದಾರರಿಗೆ ಗುಡ್ ನ್ಯೂಸ್ ಒಂದು ದೊರೆತಿದೆ. ಕೇಂದ್ರ ಸರ್ಕಾರ ಈ ಗುಡ್ ನ್ಯೂಸ್ ನೀಡಿದ್ದು, ಅದರಂತೆ ವಿಮೆ ಕಟ್ಟುವಂತಹವರು ವಿಮಾ ಕಂತಿನ ಮೇಲಿನ ಜಿ.ಎಸ್.ಟಿ. ಕಡಿತಗೊಳಿಸಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ವಿಮಾದಾರರು ಕಟ್ಟುವಂತಹ ವಿಮಾ ಕಂತಿನ ಮೊತ್ತ ಕಡಿತಗೊಳ್ಳಲಿದೆ ಎನ್ನಲಾಗಿದೆ.
ಆರೋಗ್ಯ ಹಾಗೂ ಜೀವ ವಿಮೆ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎನ್ನಬಹುದು. ಆದರೆ ಹೆಚ್ಚಿನ ವಿಮಾ ಕಂತು ಹಾಗೂ ಸುಧೀರ್ಘ ವರ್ಷಗಳ ಕಾಲ ವಿಮಾ ಕಂತು ಕಟ್ಟಬೇಕಾದ ಹಿನ್ನೆಲೆಯಲ್ಲಿ ಅನೇಕರು ವಿಮೆ ಮಾಡಿಸಿಕೊಳ್ಳಲು ಮುಂದಾಗುವುದಿಲ್ಲ. ಈ ಕಾರಣದಿಂದ ಕೇಂದ್ರ ಸರ್ಕಾರ ವಿಮಾ ಕಂತುಗಳ ಮೇಲಿನ ಜಿ.ಎಸ್.ಟಿಯನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆಯಂತೆ. ಈ ನಿರ್ಧಾರವನ್ನು ಮುಂದಿನ ತಿಂಗಳು ನಡೆಯಲಿರುವ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ. ಈಗಾಗಳೇ ಹಲವು ಸುತ್ತುಗಳ ಚರ್ಚೆ ನಡೆದಿದ್ದು, ಮುಂದಿನ ಸಭೆಯಲ್ಲಿ ವಿಮಾ ಕಂತಗಳ ಜಿ.ಎಸ್.ಟಿ. ಕಡಿತ ನಿರ್ಧಾರಕ್ಕೆ ಕೇಂದ್ರ ಮುಂದಾಗಲಿದ್ದು, ಈ ಸಂಬಂಧ ಜಿ.ಎಸ್.ಟಿ. ಕೌನ್ಸಿಲ್ ಗೆ ಪ್ರಸ್ತಾವನೆಯನ್ನು ಸಹ ಸಲ್ಲಿಸಿದೆ. ಈ ಕಡಿತದಿಂದ ರಾಜ್ಯಗಳಿಗೆ ಸುಮಾರು 11 ಸಾವಿರ ಕೋಟಿ ರೂ. ನಷ್ಟ ಉಂಟಾಗಲಿದ್ದು, ಇದನ್ನು ಸರಿದೂಗಿಸಲು ಐಷಾರಾಮಿ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಿಸುವ ಚಿಂತನೆಯಿದೆ ಎನ್ನಲಾಗಿದೆ.
ಇನ್ನೂ ಕೇಂದ್ರ ಸರ್ಕಾರದ ಈ ಹೊಸ ಪ್ರಸ್ತಾವನೆಯಂತೆ 5 ಲಕ್ಷ ರೂಪಾಯಿ ವರೆಗಿನ ಆರೋಗ್ಯ ವಿಮೆ ಪ್ರೀಮಿಯಂಗೆ ಯಾವುದೇ ಜಿ.ಎಸ್.ಟಿ. ಇರುವುದಿಲ್ಲ. ಇದರಿಂದಾಗಿ ಪ್ರತಿಯೊಬ್ಬರು ಕಡಿಮೆ ಮೊತ್ತದಲ್ಲಿ 5 ಲಕ್ಷ ರೂಪಾಯಿ ವಿಮೆ ಮಾಡಿಸಿಕೊಳ್ಳಲು ಸಹಕಾರಿಯಾಗಲಿದೆ. ಇದರಿಮದ ಕುಟುಂಬದ ಆರ್ಥಿಕ ಭದ್ರತೆ ಸಹ ಹೆಚ್ಚಲಿದೆ. ಆರೋಗ್ಯ, ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ನೆರವಾಗಲಿದೆ. ಹೊಸ ಪ್ರಸ್ತಾವನೆಯಲ್ಲಿ 5 ಲಕ್ಷ ರೂ ವರೆಗಿನ ವಿಮೆಗಳಿಗೆ ಜಿಎಸ್‌ಟಿ ತೆಗೆದುಹಾಕಲು ನಿರ್ಧರಿಸಿದೆ. ಇದರ ಜೊತೆಗೆ ಎಲ್ಲಾ ಹಿರಿಯ ನಾಗರಿಕರ ಆರೋಗ್ಯ ವಿಮೆ ಪ್ರೀಮಿಯಂಗಳಿಗೆ ಜಿಎಸ್‌ಟಿ ತೆಗೆದು ಹಾಕಲು ಸಹ ನಿರ್ಧಾರ ಮಾಡಲಾಗಿದೆಯಂತೆ. ಈ ಮೂಲಕ ಕೇಂದ್ರ ಸರ್ಕಾರ ಹಿರಿಯ ನಾಗರೀಕರಿಗೆ ವಿಶೇಷ ಸವಲತ್ತನ್ನು ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರ ಆರೋಗ್ಯ ವಿಮೆಯನ್ನು 70 ವರ್ಷಕ್ಕಿಂತ ಹಿರಿಯ ನಾಗರೀಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಸೌಲಭ್ಯ ಒದಗಿಸಲಾಗಿದೆ.