ಇತ್ತೀಚಿಗೆ ಡ್ರಗ್ಸ್ ಪ್ರಕರಣಗಳು ಹೆಚ್ಚಾಗಿ ಸದ್ದು ಮಾಡುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್. ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ಧಾಳಿ ನಡೆಸಿದ್ದು, ಈ ವೇಳೆ ಡ್ರಗ್ಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರೂ ಸಹ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಇಂದು ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಸಿಸಿಬಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಕಾನ್ ಕಾರ್ಡ್ ಮಾಲೀಕ ಗೋಪಾಲರೆಡ್ಡಿ ಎಂಬುವವರ ಮಾಲೀಕತ್ವದ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತಂತೆ. ಈ ಪಾರ್ಟಿಯನ್ನು ಹೈದರಾಬಾದ್ ಮೂಲದ ವಾಸು ಎಂಬಾತನ ಆಯೋಜಿಸಿದ್ದ ಎನ್ನಲಾಗಿದೆ. ಹುಟ್ಟುಹಬ್ಬದ ಹೆಸರಿನಲ್ಲಿ ನಡೆಯುತ್ತಿದ್ದ ಈ ಪಾರ್ಟಿ ತಡರಾತ್ರಿ 2 ಗಂಟೆಯಾದರೂ ಸಹ ಮುಗಿದಿರಲಿಲ್ಲವಂತೆ. ಅವಧಿ ಮೀರಿ ಪಾರ್ಟಿ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಡ್ರಗ್ಸ್ ಪತ್ತೆಯಾಗಿದೆ ಎನ್ನಲಾಗಿದೆ.
ಇನ್ನೂ ಸಿಸಿಬಿಯ ಆಂಟಿ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಈ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದಾಗ, 17 MDMA ಮಾತ್ರೆಗಳು ಹಾಗೂ ಕೋಕೆನ್ ಪತ್ತೆಯಾಗಿದೆ. ಈ ಪಾರ್ಟಿಯಲ್ಲಿ ಆಂಧ್ರ ಹಾಗೂ ಬೆಂಗಳೂರು ಮೂಲದ 100 ಕ್ಕೂ ಹೆಚ್ಚು ಮಂದಿ ಹಾಗೂ 25 ಕ್ಕೂ ಹೆಚ್ಚು ಯುವತಿಯರು ಭಾಗಿಯಾಗಿದ್ದರಂತೆ. ಪಾರ್ಟಿ ಆಯೋಜಕ ಪಾರ್ಟಿಗಾಗಿ ಆಂಧ್ರದಿಂದ ಪ್ಲೈಟ್ ನಲ್ಲಿ ಹಲವರನ್ನು ಕರೆಸಿಕೊಂಡಿದ್ದ ಎನ್ನಲಾಗಿದೆ. ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರ ಸಹ ಇದೆ. ಒಂದು ಬೆಂಜ್ ಕಾರ್ ಬಂದಿದ್ದು, ಈ ಕಾರ್ ನಲ್ಲಿ ಆಂಧ್ರ ಶಾಸಕ ಕಾಕನಿ ಗೋವರ್ಧನರೆಡ್ಡಿ ಹೆಸರಿನ ಪಾಸ್ ಸಹ ಸಿಕ್ಕಿದೆ ಎನ್ನಲಾಗಿದೆ.
ಇನ್ನೂ ಧಾಳಿಯ ವೇಳೆ ಫಾರ್ಮ್ ಹೌಸ್ ಬಳಿ ಮರ್ಸಿಡಿಸ್ ಬೆನ್ಜ್, ಜಗ್ವಾರ್, ಆಡಿ ಸೇರಿದಂತೆ 15ಕ್ಕೂ ಹೆಚ್ಚು ಐಶಾರಾಮಿ ಕಾರುಗಳು ಇದ್ದವು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ಮಾಡಲ್ ಗಳು ಹಾಗೂ ಟೆಕ್ಕಿಗಳೂ ಸಹ ಭಾಗಿಯಾಗಿದ್ದು, ಅವರಲ್ಲಿ ಕೆಲ ತೆಲುಗು ನಟಿಯರೂ ಸಹ ಭಾಗಿಯಾಗಿದ್ದರಂತೆ. ಭಾನುವಾರ ಸಂಜೆ ಐದು ಗಂಟೆಯಿಂದ ಆರು ಗಂಟೆಯವರೆಗೂ ಪಾರ್ಟಿ ನಡೆಯಬೇಕಿತ್ತಂತೆ. ಆದರೆ ತಡರಾತ್ರಿ 2 ಗಂಟೆಯಾದರೂ ಪಾರ್ಟಿ ಮುಗಿದಿರಲಿಲ್ಲ. ಇನ್ನೂ ಈ ಪಾರ್ಟಿಗೆ ಬರೋಬ್ಬರಿ 30-50 ಲಕ್ಷ ಖರ್ಚು ಮಾಡಿ ಆಯೋಜನೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.