ಗುಡಿಬಂಡೆ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸೇವಾ ಮನೋಭಾವ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕೆಂದು ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿಧಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ದಪ್ಪರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಮ್ಮ ಅನುದಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಂಗಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಭಾವಿ ಪ್ರಜೆಗಳಾಗಬೇಕು. ದೇಶದ ಅಭಿವೃದ್ದಿ ನಿಮ್ಮ ಕೈಯಲ್ಲಿದೆ. ಯಾವುದೇ ದುಷ್ಚಟಗಳಿಗೆ ಬಲಿಯಾಗದೇ, ಮೊಬೈಲ್ ಟಿವಿಗಳಿಗೆ ದಾಸರಾಗದೇ ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಂಡು ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು. ತಾವು ಸಾಧನೆ ಮಾಡುವ ಮೂಲಕ ಪೋಷಕರು ಹಾಗೂ ಇಡೀ ದೇಶಕ್ಕೆ ಒಳ್ಳೆಯ ಹೆಸರು ತಂದುಕೊಡಬೇಕೆಂದರು.
ಬಳಿಕ ಗ್ರಾಮ ವಿಕಾಸ ಸಂಸ್ಥೆಯ ತಾಲೂಕು ಕೃಷಿ ಸಂಯೋಜಕ ವಾಹಿನಿ ಸುರೇಶ್ ಮಾತನಾಡಿ, ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.
ಈ ವೇಳೆ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಸದಸ್ಯೆ ಮುರಳಿ, ಶಾಲಾ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್, ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಶ್ರೀಧರ್ ಸಾಗರ್, ರಾಜಗೋಪಾಲ್, ಸಂಯೋಜಕ ವೆಂಕಟೇಶ್, ಪೋಷಕರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.