ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ತಮ್ಮ ದಿನನಿತ್ಯದ ಆಫೀಸ್ ಹಾಗೂ ತುರ್ತು ಪ್ರಯಾಣಕ್ಕೆ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳನ್ನು ನೆಚ್ಚಿಕೊಳ್ಳುತ್ತಾರೆ. ಆದರೆ, ಅದೇ ಬೈಕ್ ಸವಾರಿ ಜೀವಕ್ಕೆ ಕಂಟಕವಾದರೆ? ಇಂತಹದ್ದೇ ಒಂದು (Bengaluru Rapido Accident) ಭೀಕರ ಅನುಭವ ಎದುರಾಗಿದೆ 32 ವರ್ಷದ ಸಾನಿ ಕೃಷ್ಣಾ ಎಂಬ ಯುವತಿಗೆ.

ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಾಹೀರಾತು ನೀಡುವ ‘ರ್ಯಾಪಿಡೋ’ (Rapido) ಸಂಸ್ಥೆಯು, ಭೀಕರ ರಸ್ತೆ ಅಪಘಾತದ ಬಳಿಕ ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಾನಿ ಗಂಭೀರ ಆರೋಪ ಮಾಡಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ₹20 ಲಕ್ಷಕ್ಕೂ ಅಧಿಕ ವೈದ್ಯಕೀಯ ವೆಚ್ಚ ಭರಿಸಿರುವ ಅವರು, ಇದೀಗ ಕಂಪನಿಯ ವಿರುದ್ಧ ₹20 ಲಕ್ಷ ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯದ (Consumer Court) ಬಾಗಿಲು ತಟ್ಟಲು ಸಜ್ಜಾಗಿದ್ದಾರೆ.
Bengaluru Rapido Accident – ಅಪಘಾತ ನಡೆದಿದ್ದು ಹೇಗೆ? ಇಲ್ಲಿದೆ ಪೂರ್ತಿ ವಿವರ
ಕೇರಳ ಮೂಲದ ಇಂಟೀರಿಯರ್ ಡಿಸೈನರ್ ಆಗಿರುವ ಸಾನಿ ಕೃಷ್ಣಾ, ಜೂನ್ 17ರಂದು ಬೆಳಿಗ್ಗೆ ತಮ್ಮ ದಿನನಿತ್ಯದ ಕೆಲಸಕ್ಕಾಗಿ ಬೈರಸಂದ್ರದಲ್ಲಿದ್ದ ಮನೆಯಿಂದ ದೊಮ್ಲೂರ್ನಲ್ಲಿದ್ದ ಕಚೇರಿಗೆ ಹೋಗಲು ರ್ಯಾಪಿಡೋ ಬೈಕ್ ಬುಕ್ ಮಾಡಿದ್ದರು.
ಬಾಗ್ಮನೆ ಟೆಕ್ ಪಾರ್ಕ್ ಬಳಿ ಸಂಭವಿಸಿದ ದುರಂತ
ಪ್ರಯಾಣ ಆರಂಭಿಸಿ ಕೇವಲ ಒಂದು ಕಿಲೋಮೀಟರ್ ಸಾಗುವಷ್ಟರಲ್ಲಿ, ಬಾಗ್ಮನೆ ಟೆಕ್ ಪಾರ್ಕ್ ಸಮೀಪ ಬೈಕ್ ಚಾಲಕ ಅಪಾಯಕಾರಿ ರೀತಿಯಲ್ಲಿ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಒಂದನ್ನು ಓವರ್ಟೇಕ್ ಮಾಡಲು ಯತ್ನಿಸಿದ್ದಾನೆ. ಈ ರಿಸ್ಕಿ ಸಾಹಸದಿಂದಾಗಿ ಬೈಕ್ ನಿಯಂತ್ರಣ ತಪ್ಪಿ ಸಾನಿ ರಸ್ತೆಗೆ ಬಿದ್ದಿದ್ದಾರೆ. ಕ್ಷಣಮಾತ್ರದಲ್ಲಿ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಚಕ್ರ ಅವರ ದೇಹದ ಮೇಲೆ ಹರಿದು ಸಾನಿ ತೀವ್ರವಾಗಿ ಗಾಯಗೊಂಡರು.

ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ, ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ತದನಂತರ ಹೆಚ್ಚಿನ ಚಿಕಿತ್ಸೆ ಮತ್ತು (Bengaluru Rapido Accident) ರಿಹ್ಯಾಬಿಲಿಟೇಶನ್ಗಾಗಿ ಕೇರಳದ ಕೋಝಿಕ್ಕೋಡ್ನ ಮಿತ್ರಾಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
“ಮಹಿಳೆಯರ ಸುರಕ್ಷತೆ ಬರಿ ಜಾಹೀರಾತಿಗಷ್ಟೇನಾ?” – ಇನ್ಸ್ಟಾಗ್ರಾಮ್ನಲ್ಲಿ ಯುವತಿಯ ಆಕ್ರೋಶ
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ಸಾನಿ ಕೃಷ್ಣಾ, ರ್ಯಾಪಿಡೋ ಸಂಸ್ಥೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ರ್ಯಾಪಿಡೋ ಸಂಸ್ಥೆಯು ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ಜಾಹೀರಾತು ನೀಡುತ್ತದೆ. ಜೂನ್ 17ರಂದು ನಾನು ಅವರನ್ನು ನಂಬಿ ಪ್ರಯಾಣ ಬೆಳೆಸಿದ್ದೆ. ಆದರೆ ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ನನ್ನ ಮೇಲೆ ಹರಿದರೂ, ಕಂಪನಿ ನನ್ನನ್ನು ಅನಾಥವಾಗಿ ಬಿಟ್ಟಿತು.”
ಕಾನೂನು ನೋಟಿಸ್ಗೆ ಆಟೋಮೇಟೆಡ್ ಇಮೇಲ್ ಪ್ರತಿಕ್ರಿಯೆ
ಅಪಘಾತದ ಬಳಿಕ ಕಂಪನಿಗೆ ಕಾನೂನು ನೋಟಿಸ್ ಕಳುಹಿಸಿದಾಗ, ಕಂಪನಿಯು ಕೇವಲ ಆಟೋಮೇಟೆಡ್ ಇಮೇಲ್ ಕಳುಹಿಸಿ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಗೆ ಸೂಚಿಸಿತು. ₹20 ಲಕ್ಷಕ್ಕೂ ಹೆಚ್ಚು ಆಸ್ಪತ್ರೆ ವೆಚ್ಚವಾಗಿದ್ದರೂ, ಕಂಪನಿಯ ಇನ್ಶೂರೆನ್ಸ್ ನೀತಿಯಿಂದ ಸಿಕ್ಕಿದ್ದು ಕೇವಲ ₹1 ಲಕ್ಷ ಪರಿಹಾರ ಮಾತ್ರ ಎನ್ನುವುದು ಸಾನಿ ಅವರ ಆರೋಪ. Read this also : ಆಟೋ ಓಡಿಸುತ್ತಲೇ ಅಶ್ಲೀಲ ವಿಡಿಯೋ ನೋಡಿದ ರ್ಯಾಪಿಡೋ ಚಾಲಕ! ಆತಂಕಕಾರಿ ದೃಶ್ಯ ಹಂಚಿಕೊಂಡ ಯುವತಿ..!

“ಅಪಘಾತದ ಬಳಿಕವೇ ನನಗೆ ಗೊತ್ತಾಗಿದ್ದು, ನನ್ನಂತೆಯೇ ಅನೇಕ ಜನರು ಇಂತಹ ಅನುಭವ ಎದುರಿಸಿದ್ದಾರೆ. ರ್ಯಾಪಿಡೋದ ‘ಸುರಕ್ಷತಾ ಗ್ಯಾರಂಟಿ’ ಎನ್ನುವುದು ಬರಿ ಮಾರ್ಕೆಟಿಂಗ್ ಸುಳ್ಳು. ನಮ್ಮ ಜೀವಗಳನ್ನು ಅವರು (Bengaluru Rapido Accident) ಕ್ಷುಲ್ಲಕವಾಗಿ ಕಾಣಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ಗ್ರಾಹಕ ನ್ಯಾಯಾಲಯಕ್ಕೆ ಹೋಗುತ್ತಿದ್ದೇನೆ” ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ರ್ಯಾಪಿಡೋ ಕಂಪನಿ ನೀಡಿರುವ ಸ್ಪಷ್ಟನೆ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಸಾನಿ ಅವರ ವಿಡಿಯೋ (Viral Video Link) ವೈರಲ್ ಆಗಿ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ರ್ಯಾಪಿಡೋ ಸಂಸ್ಥೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ತಾವು ಸಂತ್ರಸ್ತೆ ಸಾನಿ ಕೃಷ್ಣಾ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ನೀಡುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಕಂಪನಿಯ ಈ ಹೇಳಿಕೆಯನ್ನು ಸಾನಿ ಕಟುವಾಗಿ ಅಲ್ಲಗೆಳೆದಿದ್ದಾರೆ.
