Bengaluru : ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಂದಿ ಕಾಮುಕರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಕೋರಮಂಗಲದ ಜ್ಯೋತಿ ನಿವಾಸ ಜಂಕ್ಷನ್ ಬಳಿಯಿರುವ ಖಾಸಗಿ ಹೋಟೆಲ್ ನ ಟೆರೆಸ್ ಮೇಲೆ ಕಾಮುಕರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಸಂತ್ರಸ್ತ ಮಹಿಳೆ ತಡರಾತ್ರಿ 12 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಮಹಿಳೆಯನ್ನು ನಾಲ್ವರು ಭೇಟಿ ಮಾಡಿದ್ದಾರೆ. ಬಳಿಕ ತಾವು ಹಳೇಯ ಪರಿಚಯಸ್ಥರಂತೆ ಮಾತನಾಡಿ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಮುಚ್ಚಿದ್ದ ಹೋಟೆಲ್ ಒಂದರ ಟೆರೆಸ್ ಮೇಲೆ ಕರೆದುಕೊಂಡು ಹೋಗಿ ಊಟ ಮಾಡಿದ್ದಾರೆ. ನಂತರ ನಾಲ್ಕು ಮಂದಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ನಂತರ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಆರೋಪಿಗಳು ಮಹಿಳೆಯಿಂದ ಮೊಬೈಲ್, ಪರ್ಸ್ ಕಿತ್ತುಕೊಂಡು ಮಹಿಳೆಯನ್ನು ಅಲ್ಲಿಂದ ಓಡಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮಹಿಳೆ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಇನ್ನೂ ಈ ಸಂಬಂಧ ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ಮೂಲದ ಅಜಿತ್, ವಿಶ್ವಾಸ್, ಶಿವು ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ತಲೆಮರೆಸಿಕೊಂಡ ಮತ್ತೋರ್ವ ಆರೋಪಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ ಎನ್ನಲಾಗಿದೆ.
ತೆಲಂಗಾಣದಲ್ಲಿ 8 ವರ್ಷದ ಬಾಲಕಿ ಮೇಲೆ ಇಬ್ಬರಿಂದ ಲೈಂಗಿಕ ದೌರ್ಜನ್ಯ

ತೆಲಂಗಾಣದಲ್ಲಿ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರನ್ನು ಸ್ಥಳೀಯರು ಹಿಡಿದ ಥಳಿಸಿದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಇಬ್ಬರು ಕಾಮುಕರು ಮನೆಯ ಎದುರು ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಪೊದೆಯ ಹಿಂದೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆಗ ಬಾಲಕಿ ಜೋರಾಗಿ ಕೂಗಿಕೊಂಡಿದ್ದಾಳೆ. ಅದನ್ನು ಕೇಳಿಸಿಕೊಂಡು ಬಂದ ಸ್ಥಳೀಯರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಮತ್ತೋರ್ವ ಕಾಮುಕ ಓಡಿ ಹೋಗಿದ್ದಾನೆ. ಇನ್ನೂ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎನ್ನಲಾಗಿದೆ.