ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಡಾ ಸೈಟು ಹಂಚಿಕೆ ಪ್ರಕರಣ (MUDA Site Scam) ಜೋರು ಸದ್ದು ಮಾಡುತ್ತಿದೆ. ಈ ಪ್ರಕರಣ ಇದೀಗ ವಿರೋಧ ಪಕ್ಷಗಳಿಗೆ ಒಳ್ಳೆಯ ಆಹಾರವಾಗಿದೆ ಎಂದೇ ಹೇಳಲಾಗುತ್ತಿದೆ. ಇದೀಗ ಈ ಪ್ರಕರಣದ ಕುರಿತು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿದ್ದು, ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದು ಹೇಳಿದ್ದಾರೆ.
ಮುಡಾ ಸೈಟು ಹಂಚಿಕೆ ಪ್ರಕರಣ (MUDA Site Scam)ದ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ ಎಂದು ಸಿಎಂ ರವರು ಹೇಳುತ್ತಾರೆ. ಹಾಗಿದ್ದಲ್ಲಿ ಈ ಪ್ರಕರಣವನ್ನು ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು. ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಬೇಕು. ಬೇರೆ ಬೇರೆ ಸರ್ಕಾರದ ಸ್ಕೀಂನಲ್ಲಿ ಜಮೀನು ಹಂಚಿಕೆಯಾಗಿರುತ್ತದೆ. ಈ ಯೋಜನೆ ನ್ಯಾಯ ಸಮ್ಮತವಾಗಿ ಮಾಡಿಕೊಂಡಿದ್ದಲ್ಲಿ ಯಾವುದೇ ತಕರಾರಿಲ್ಲ. ಆದರೆ ಯೋಜನೆ ಬದಲಾವಣೆ ಮಾಡಿಕೊಂಡರೇ ತನಿಖೆಯಿಂದ ಹೊರಬರುತ್ತದೆ. ಆದ್ದರಿಂದ ಸಿಬಿಐ ಅಥವಾ ನ್ಯಾಯಾಧೀಶರಿಂದ ಈ ಪ್ರಕರಣ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಇನ್ನೂ ಇದೇ ಸಮಯದಲ್ಲಿ ಡೆಂಗ್ಯೂ ಬಗ್ಗೆ ಸಹ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಡೆಂಗ್ಯೂ ಜ್ವರವನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಡೆಂಗ್ಯೂ ಪ್ರಕರಣಗಳು ಕಳೆದ ಒಂದೂವರೆ ತಿಂಗಳಿಂದ ಏರುತ್ತಾ ಬಂದಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ, ಆರೋಗ್ಯ ಇಲಾಖೆ, ಜಿಲ್ಲಾ ಆರೋಗ್ಯಾಧಿಕಾರಿಗಳು ತೆಗೆದುಕೊಳ್ಳಬೇಕಿತ್ತು. ಆದರೆ ಯಾರೂ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಮಳೆಗಾಲದ ಸಮಯದಲ್ಲಿ ಮಳೆಯಿಂದ ನೀರು ಶೇಖರಣೆಯಾಗುವುದರಿಂದ ಬರುವಂತಹ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಔಷಧ ಸಿಂಪಡಿಸುವ ಕೆಲಸ ಮಾಡಬೇಕಿತ್ತು. ಆ ಕೆಲಸ ಮಾಡಿಲ್ಲ. ಡೆಂಗ್ಯೂ ಜ್ವರ ಬಂದರೂ ಸಹ ಅದನ್ನು ಬೇರೆ ಕ್ಯಾಟಗೆರಿಗಳಲ್ಲಿ ಹಾಕಿ ಡೆಂಗ್ಯೂ ಕಡಿಮೆಯಿದೆ ಎಂಬ ತೋರಿಸುವ ಪ್ರಯತ್ನಗಳನ್ನು ಸಹ ಮಾಡಿದ್ದಾರೆ ಎಂದು ಆರೋಪಿಸಿದರು.
ಡೆಂಗ್ಯೂ ಜ್ವರ ಪತ್ತೆ ಮಾಡಲು ಟೆಸ್ಟಿಂಗ್ ಕಡಿಮೆ ಮಾಡಿದ್ದಾರೆ. ಸಾಕಷ್ಟು ಸಾವು ನೋವು ಆಗುತ್ತಿದೆ. ಆರೋಗ್ಯ ಇಲಾಖೆಯ ಮಂತ್ರಿಗಳು ಅಧಿಕಾರಿಗಳು ಕೇವಲ ಸಭೆ ಮಾಡಿ ಎಲ್ಲಾ ಸರಿಯಿದೆ ಎಂಬ ಭಾವನೆಯಲ್ಲಿದ್ದಾಋಎ. ಚಿಕಿತ್ಸೆ, ಔಷಧಿ ಹಾಗೂ ಪರೀಕ್ಷೆಗಳನ್ನು ಸರಿಯಾಗಿ ಮಾಡಬೇಕು. ಅನೇಕ ಜಿಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆ, ಸರಿಯಾದ ಔಷಧ ವ್ಯವಸ್ಥೆ ಸಹ ಇಲ್ಲ. ಇನ್ನೂ ತಾಲೂಕು ಆಸ್ಪತ್ರೆಗಳಲ್ಲಿ ಕೇಳುವವರೇ ಇಲ್ಲದಂತಾಗಿದೆ. ಅತ್ಯಂತ ಚಿಂತಾಜನಕವಾದ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಇದ್ದಾರೆ. ಕೂಡಲೇ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ ಡೆಂಗ್ಯೂ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಇದು ದೊಡ್ಡ ಪ್ರಮಾಣದಲ್ಲಿ ಹರಡಿದರೇ ಆರೋಗ್ಯ ಕಾಪಾಡುವುದು ಕಷ್ಟಕರವಾಗುತ್ತದೆ ಎಂದು, ಎಲ್ಲರಿಗೂ ಉಚಿತ ತಪಾಸಣೆಯ ವ್ಯವಸ್ಥೆ ಮಾಡಬೇಕು. ಈ ಕುರಿತು ಆರೋಗ್ಯ ಸಚಿವರು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.