ಗುಡಿಬಂಡೆ: 12ನೇ ಶತಮಾನದಲ್ಲಿದ್ದಂತಹ ಮೂಡನಂಬಿಕೆ ಸೇರಿದಂತೆ ಅನೇಕ ಅನಿಷ್ಟಪದ್ದತಿಗಳನ್ನು ನಿರ್ಮೂಲನೆ ಮಾಡಲು ಹಾಗೂ ಸಮಾನತೆಯ ಸಂದೇಶವನ್ನು ಸಾರಿದಂತಹ ವಿಶ್ವಗುರು ಬಸವಣ್ಣನವರ ತತ್ವಗಳು ಹಾಗೂ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್ ತಿಳಿಸಿದರು.
ಪಟ್ಟಣದ ಮುಖ್ಯರಸ್ತೆಯಲ್ಲಿ ಸಸಿ ನೆಡುವ ಮೂಲಕ ಬಸವಣ್ಣನವರ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಿತ್ತಿದ ಬಸವಣ್ಣನವರ ಚಿಂತನೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಒಳಿತಿಗಾಗಿ ಶ್ರಮಿಸಿದ ಅವರ ವಿಚಾರಗಳಿಗೆ ಜಾತಿಯ ಲೇಪ ಹಚ್ಚುವ ಅಗತ್ಯವಿಲ್ಲ. ಬಸವಣ್ಣನವರ ವಿಚಾರಗಳನ್ನು ಸಮಾಜದ ತಳಮಟ್ಟದ ಜನರಿಗೂ ತಲುಪಿಸುವ ಪ್ರಯತ್ನ ಆಗಿದ್ದರೆ ಈವರೆಗೆ ಸಮಾಜದಲ್ಲಿ ಸಮಾನತೆಯ ಆಶಯ ಸ್ವಲ್ಪ ಮಟ್ಟಿಗಾದರೂ ಸಾಕಾರವಾಗುತ್ತಿತ್ತು. ಬಸವಣ್ಣನವರ ವಿಚಾರಗಳನ್ನು ಕೇವಲ ಭಾಷಣಗಳಿಗಷ್ಟೇ ಸೀಮಿತಗೊಳಿಸದೇ ವಿಶ್ವದಾದ್ಯಂತ ಪರಿಚಯಿಸುವ ಕೆಲಸವಾಗಬೇಕು ಎಂದರು.
ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀರಾಮಪ್ಪ ಮಾತನಾಡಿ, ಬಸವಣ್ಣನವರ ವಿಚಾರಗಳಿಂದ ಪ್ರಸ್ತೂತ ದಿನಗಳಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಕಾಯಕ ತತ್ವವನ್ನು ಪ್ರತಿಪಾದಿಸಿದ ಬಸವಣ್ಣನವರ ವಿಚಾರಗಳನ್ನು ಎಲ್ಲರೂ ತಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿನ ಮೂಡನಂಬಿಕೆ, ಕಂದಾಚಾರ ಸೇರಿದಂತೆ ಸಾಮಾಜಿಕ ಪಿಡುಗುಗಳ ಬಗ್ಗೆ ಹೋರಾಡಿದಂತಹ ಮಹನೀಯರಾಗಿದ್ದಾರೆ. ಅವರ ಜಯಂತಿಯನ್ನು ಕೇವಲ ಆಚರಣೆ ಮಾಡಿದರೇ ಸಾಲದು ಅವರ ತತ್ವಾದರ್ಶಗಳನ್ನು ನಾವು ಪಾಲನೆ ಮಾಡಬೇಕು ಎಂದರು.
ಈ ಸಮಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಗುಂಪುಮರದ ಆನಂದ್, ಪರಿಸರ ಪ್ರೇಮಿಗಳಾದ ರಮೇಶ್, ಬಾಬು, ಅಂಬರೀಶ್, ನಾಗರಾಜು, ಮುನ್ನಾ, ರಾಜೇಶ್, ಸೈಫ್ ಉಲ್ಲಾ ಸೇರಿದಂತೆ ಹಲವರು ಇದ್ದರು.