ಅಂಗನವಾಡಿ ಮಕ್ಕಳು ಸೇರಿದಂತೆ ಬಡವರಿಗೆ ವಿತರಣೆ ಮಾಡಬೇಕಾಗಿದ್ದ ಅಕ್ಕಿ, ಗೋಧಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (Bagepalli News) ತಾಲೂಕಿನ ಪೂಲವಾರಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ಮೌಲ್ಯದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಬಡ ಮಕ್ಕಳಿಗೆ ಪೌಷ್ಠಿಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಬಡ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಪ್ರತಿ ಮಗುವಿಗೂ ತಲುಪಿಸುವಂತಹ ಕೆಲಸ ಮಾಡುತ್ತಿದೆ ಆದರೆ ಅಂಗನವಾಡಿ ಮಕ್ಕಳು ಸೇರಿದಂತೆ ಬಡವರಿಗಾಗಿ ಸರ್ಕಾರ ಪೂರೈಸುವ ಅಕ್ಕಿ,ಗೋಧಿ, ಬೆಳೆ,ಹುರಳಿ,ಉಪ್ಪು ಇತ್ಯಾಧಿ ಆಹಾರ ಪದಾರ್ಥಗಳನ್ನು ದಂಧೆಕೋರರು ಆಕ್ರಮವಾಗಿ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಿ ಲಭಗೊಳಿಸುವಂತಹ ಕೆಲಸ ಮಾಡುತ್ತಿರುವ ಹಿನ್ನಲೆಯಲ್ಲಿ ಬಡವರಿಗೆ ಸಿಗಬೇಕಾಗಿರುವ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ತಾಲೂಕಿನ ಪೂಲವಾರಿಪಲ್ಲಿ ಗ್ರಾಮದ ನಾಗರಾಜ್ ಎಂಬುವವರಿಗೆ ಸೇರಿದ ಮನೆಯಲ್ಲಿ ವೆಂಕಟೇಶ್ ಎಂಬವವರು ಆಕ್ರಮವಾಗಿ ಸರ್ಕಾರಿ ಪಡಿತರ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಗೋದಾಮಿವಿನ ಮೇಲೆ ದಾಳಿ ನಡೆಸಿ 50 ಕೆ.ಜಿ. ತೂಕದ 109 ಅಕ್ಕಿ ಮೂಟೆಗಳು, 21 ಗೋದಿ ಮೂಟೆಗಳು, 442 ಹುರಳಿ ಮೂಟೆಗಳು, ಉಪ್ಪು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿರುತ್ತಾರೆ.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಕಣ್ಣು ತಪ್ಪಿಸಿ ಇಷ್ಟು ದೊಡ್ಡ ಮಟ್ಟದಲ್ಲಿ ಲೂಟಿಮಾಡಲು ಸಾದ್ಯವಾಗಲ್ಲ ಇದರ ಹಿಂದೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಕೈವಾಡ ಇರಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ದೊಡ್ಡ ಮಟ್ಟದಲ್ಲಿ ಪಡಿತರ ಆಹಾರ ಪದಾರ್ಥಗಳನ್ನು ದಂಧೆಕೋರರು ಆಕ್ರಮವಾಗಿ ತಮ್ ಗೋದಾಮುಗಳಿಗೆ ಸಾಗಾಣಿಕೆ ಮಾಡುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಬಡವರ ಅನ್ನಕ್ಕೆ ಕನ್ನ ಹಾಕುವ ಇಂತಹ ದಂಧೆಕೋರರ ವಿರುದ್ದ ಕಾನೂನು ರೀತ್ಯ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ನಿಟ್ಟಾಳಿ, ಸಿಡಿಪಿಓ ರಮಚಂದ್ರ, ಆಹಾರ ನಿರೀಕ್ಷಕಿ ಪುಷ್ಪ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ನರಸಿಂಹರೆಡ್ಡಿ, ಪರಗೋಡು ಪಿಡಿಓ ನಾಗಮಣಿ ಮತ್ತಿತರರು ಇದ್ದರು.