ಬಾಗೇಪಲ್ಲಿ: ತಾಲೂಕಿನ ಪುರಾಣ ಪ್ರಸಿದ್ದ ಗಡದಿಂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರಾರು ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಬಾಗೇಪಲ್ಲಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಸಾವಿರಾರು ಭಕ್ತರು ಭಾಗಿಯಾಗಿದ್ದರು.
ಗಡದಿಂ ಶ್ರೀ ಲಕ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರಕಾಶ್ ರಾವ್ ನೇತೃತ್ವದಲ್ಲಿ ಹೋಮ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ರಥೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲ್ಲೇ ಹೋಮ ಹವನ, ರಥಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಲಾಗಿತ್ತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ತಹಸೀಲ್ದಾರ್ ಪ್ರಶಾಂತ್ ಕೆ ಪಾಟಿಲ್ ದೇವಾಲಯದಲ್ಲಿ ಸ್ವಾಮಿಗೆ ವಿಷೇಶ ಪೂಜೆ ಸಲ್ಲಿಸಿ, ನಂತರ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಉತ್ಸವ ಮೂರ್ತಿಗಳನ್ನು ಮಂಗಳವಾದ್ಯಗೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆಯಲ್ಲಿ ತಂದು ರಥದ ಮೇಲೆ ಪ್ರತಿಷ್ಠಾಪನೆ ಮಾಡಿ ನಂತರ ಮಹಾ ಮಂಗಳಾರತಿ ನಡೆಸಲಾಯಿತು. ತಾಲೂಕಿನ ನಾನಾ ಕಡೆಗಳಿಂದ ಆಗಮಿಸಿದ್ದ ಸಹಸ್ರಾರಾರು ಸ್ವಾಮಿಯ ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ ರಥವನ್ನು ಭಕ್ತಿಯಿಂದ ಎಳೆದರು. ಬಾಳೆಹಣ್ಣು, ಧವನ ತೇರಿನ ಮೇಲೆ ಎಸೆದು ತಮ್ಮ ಇಷ್ಟಾರ್ಧ ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಅವರ ಕುಟುಂಬದ ಸದಸ್ಯರು ಇಂದು ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಥವನ್ನು ಎಳೆದರು. ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆಗೆ ಬಂದಿದ್ದ ಭಕ್ತ ಸಮೂಹಕ್ಕೆ ಮಜ್ಜಿಗೆ, ಕುಡಿಯುವ ನೀರು, ಪಾನಕ, ಹೆಸರಬೇಳೆ ಇತ್ಯಾಧಿಗಳನ್ನು ವಿತರಿಸಿದರು. ವಿವಿಧ ಸಂಘ ಸಂಸ್ಥೆಗಳಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದಲ್ಲಿ ಭಕ್ತಿರಿಗೆ ಪ್ರಸಾಧ ವಿತರಿಸಿದರು.