ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವಾಲ್ಮೀಕಿ, ಮುಡಾ ಹಗರಣಗಳು ಭಾರಿ ಸದ್ದು ಮಾಡುತ್ತಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜೋರಾದ ಕಾಳಗವೇ ನಡೆಯುತ್ತಿದೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆ ಸಹ ಆಗುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra) ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಸಮಯ ಹತ್ತಿರ ಬಂದಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ (Valmiki Corporation Scam) ಸಿಎಂ ರವರೇ ಹಣಕಾಸು ಇಲಾಖೆಯ ಸಚಿವರಾಗಿದ್ದಾರೆ. ಅವರ ಸಮ್ಮತಿಯಿಲ್ಲದೇ, ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆಯಾಗಲು ಹೇಗೆ ಸಾಧ್ಯ ಎಂದರು.
ಇನ್ನೂ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Scam) ಹಗರಣದಲ್ಲಿ ಕೇವಲ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್ ರವರಷ್ಟೇ ಅಲ್ಲ, ಇನ್ನೂ ದೊಡ್ಡ ದೊಡ್ಡವರ ಹೆಸರುಗಳು ಹೊರಬರಲಿದೆ. ಈ ಆತಂಕದಿಂದಲೇ ರಾಜ್ಯದ 5 ಮಂದಿ ಸಚಿವರು ಇಡಿ ಮೇಲೆ ಆಪಾದನೆ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಸಿಎಂ ಸದನದಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ. ಸತ್ಯಸಂಗತಿಗಳನ್ನು ಮರೆಮಾಚಿ, ಸದನಕ್ಕೆ ಮತ್ತು ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುವ ಪ್ರಯತ್ನಗಳನ್ನು ಮಾಡಿದ್ದಾರೆ. ಈ ಹಗರಣದಿಂದ ತಪ್ಪಿಸಿಕೊಂಡು ಹೋಗಲು ಮುಖ್ಯಮಂತ್ರಿಗಳಿಗೆ ಸಾಧ್ಯವೇ ಇಲ್ಲ. ವಾಲ್ಮೀಕಿ ನಿಗಮದ ಹಗರಣದಿಂದ ಪ.ಜಾತಿ ಹಾಗೂ ಪಂಗಡಗಳ ಶಾಪ ನಿಮಗೆ ತಟ್ಟೆ ತಟ್ಟುತ್ತೆ. ಇಡಿ, ಸಿಬಿಐ ತನಿಖೆ ನಡೆಯುತ್ತಿದ್ದು, ನೀವು ರಾಜಿನಾಮೆ ಕೊಡುವ ಸಮಯ ಹತ್ತಿರಬಂದಿದೆ ಎಂದು ಕಿಡಿಕಾರಿದರು.
ಇನ್ನೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ಹಣ ಈ ಸರ್ಕಾರದ ಒಬ್ಬ ಸಚಿವ, ಶಾಸಕ ಹಾಗೂ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಲೂಟಿ ಹೊಡೆದು ಅದನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಇದು ಇಡಿ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟವಾಗಿದೆ. ಲೂಟಿಯಾದಂತಹ ಹಣ ಎಲ್ಲೆಲ್ಲಿ ಹೋಗಿದೆ. ಯಾವಾಗ ವಾಪಸ್ಸು ತರುತ್ತೀರಿ ಎಂದು ನಿಲುವಳಿ ಸೂಚನೆ ಮೂಲಕ ಪ್ರಶ್ನೆ ಮಾಡಿದ್ದೇವೆ, ಎಫ್.ಐ.ಆರ್ ನಲ್ಲಿ ಮಾಜಿ ಸಚಿವ ನಾಗೇಂದ್ರ, ನಿಗಮದ ಅಧ್ಯಕ್ಷ ದದ್ದಲ್ ಹೆಸರೇ ಇಲ್ಲ. ಒತ್ತಡ ಹಾಕಿ ಅವರ ಹೆಸರನ್ನು ಕೈ ಬಿಟ್ಟಿದ್ದಾರೆ. ಸದನದಲ್ಲಿ ಸಿಎಂ ತಮ್ಮ ಸರ್ಕಾರ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಆದರೆ ಸಚಿವರಿಂದ ರಾಜಿನಾಮೆ ಏಕೆ ಪಡೆದುಕೊಂಡು, ಅವರಿಗೆ ಬುದ್ದಿಯಿಲ್ಲದೇ ರಾಜಿನಾಮೆ ಕೊಟ್ರಾ ಎಂದು ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.