ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ದೀಪಾವಳಿ ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರ ಅಯೋಧ್ಯೆಯಲ್ಲಿ 8ನೇ ದಿಪೋತ್ಸವ ಆಚರಣೆಗೆ ಸಜ್ಜಾಗಿದ್ದು, ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಮಾಡುವ (Ayodhya) ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಜೊತೆಗೆ ರಾಮಮಂದಿರದಲ್ಲಿ ಪರಿಸರ ಸ್ನೇಹಿ ದೀಪಗಳನ್ನು ಪ್ರದರ್ಶನ ಮಾಡಲು ಯುಪಿ ಸರ್ಕಾರ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ.
ಅಯೋಧ್ಯೆಯು ಐತಿಹಾಸಿಕ ದೀಪಾವಳಿಗೆ ಸಜ್ಜಾಗುತ್ತಿದೆ. ಇದೇ ಜನವರಿ 22ರಂದು ರಾಮಲಲ್ಲಾಗೆ ಪ್ರಾಣ ಪ್ರತಿಷ್ಠೆ ಮಾಡಲಾಗಿದ್ದು, ಇದು ಮೊದಲ ದೀಪಾವಳಿಯಾಗಿದೆ. ಇದೇ 31 ರಂದು ತನ್ನ ಮೊದಲ ಬೆಳಕಿನ ಹಬ್ಬವನ್ನು ಆಚರಿಸಲು ಸಿದ್ಧವಾಗಿರುವ ದೇಗುಲದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಗುರಿ ಹೊಂದಾಗಿದೆ. ಸರಯು ನದಿಯ ದಡದಲ್ಲಿ ಬೃಹತ್ ದೀಪಾಲಂಕಾರದೊಂದಿಗೆ ವಿಶ್ವ ದಾಖಲೆಯನ್ನು ಸೃಷ್ಟಿಸುವ ಗುರಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಂದಿದ್ದಾರೆ. ರಾಮಮಂದಿರದಲ್ಲಿ (Ram Mandir) ಪರಿಸರ ಸ್ನೇಹಿ ದೀಪಗಳನ್ನು ಪ್ರದರ್ಶಿಸಲು ಸಿದ್ಧತೆ ನಡೆಸುತ್ತಿದ್ದು, ದೇವಾಲಯದಲ್ಲಿ ವಿಶೇಷ ದೀಪಗಳನ್ನು ಬೆಳಗಿಸಲು ತಯಾರಿ ನಡೆಸಲಾಗುತ್ತಿದ್ದು, ಇದರಿಂದ ಕಲೆಗಳು ಅಥವಾ ಹೊಗೆ ಹಿಡಿಯುವುದಿಲ್ಲ. ಈ ಬಾರಿಯ ದೀಪೋತ್ಸವದಲ್ಲಿ (Deepotsav) ಪರಿಸರ ಸಂರಕ್ಷಣೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಯುಪಿ ಸರ್ಕಾರ ಪ್ರಕಟಣೆ ಮೂಲಕ ತಿಳಿಸಿದೆ.
ದೇವಾಲಯದ ಟ್ರಸ್ಟ್ ಅಕ್ಟೋಬರ್ 29 ರಿಂದ ನವೆಂಬರ್ 1 ರವರೆಗೆ ಭವನ ದರ್ಶನ ಸಮಯವನ್ನು ವಿಸ್ತರಿಸಿದೆ, ಮಧ್ಯರಾತ್ರಿಯವರೆಗೆ ದೇವಾಲಯದ ಅಲಂಕಾರಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದೆ. ಪ್ರವಾಸಿಗರಿಗೆ ದೇವಾಲಯದ 4B ಗೇಟ್‌ನಿಂದ ಅಲಂಕಾರ ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟ ದೇವಾಲಯವನ್ನು ವೀಕ್ಷಿಸಲು ಅವಕಾಶವನ್ನು ಒದಗಿಸಲಾಗಿದೆ. ಇನ್ನು ದೀಪೋತ್ಸವದ 2024 ರ ಸಿದ್ಧತೆಗಳು ಈಗಾಗಲೇ ಮುಕ್ತಾಯದ ಅಂತಿಮ ಹಂತದಲ್ಲಿವೆ. ಕೆಲವೊಂದು ಮೂಲಗಳ ಪ್ರಕಾರ, ವಿವಿಧ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಎನ್‌ಜಿಒಗಳಿಂದ 30,000 ಕ್ಕೂ ಹೆಚ್ಚು ಸ್ವಯಂಸೇವಕರು ಅಯೋಧ್ಯೆಯ 55 ಘಾಟ್ ಗಳಾದ್ಯಂತ ದೀಪಗಳನ್ನು ವ್ಯವಸ್ಥೆಗೊಳಿಸಲು ಮತ್ತು ಕಾರ್ಯಕ್ರಮವನ್ನು ನಿರ್ವಹಿಸಲು ಸಹಾಯ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.