ಗುಡಿಬಂಡೆ: ಮನುಷ್ಯ ಸಂಪಾದನೆ ಮಾಡುವ ಹಣ, ಬಂಗಾರ ಸೇರಿದಂತೆ ಎಲ್ಲಾ ಆಸ್ತಿಯನ್ನು ಕಸಿದುಕೊಳ್ಳಬಹುದು, ಆದರೆ ವಿದ್ಯೆ ಎಂಬ ಸಂಪತ್ತನ್ನು ಮಾತ್ರ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೆಡಿಪಿ ಫೌಂಡೇಷನ್ ನ ನಿರ್ದೇಶಕ ಆನಂದ ದೇಶಪಾಂಡೆ ತಿಳಿಸಿದರು.
ತಾಲೂಕಿನ ತಾಲ್ಲೂಕಿನ ಚೆಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಸಂಪಾದಿಸಬೇಕು, ಹಣ ಕೂಡಿಡಬೇಕು ಎಂದು ಭಾವಿಸಿರುತ್ತಾರೆ. ಆದರೆ ಅದು ತಪ್ಪು, ತಾವು ತಮ್ಮ ಮಕ್ಕಳಿಗೆ ಕೊಡಬೇಕಿರುವುದು ಶಿಕ್ಷಣ ಎಂಬ ಸಂಪತ್ತು. ಶಿಕ್ಷಣ ಎಂಬ ಸಂಪತ್ತು ಮಾತ್ರ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಪೋಷಕರು ತಮ್ಮ ಮಕ್ಕಳಲ್ಲಿನ ಪ್ರತಿಭೆ, ಆಸಕ್ತಿಯನ್ನು ಗಮನಿಸಿ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳಾದ ತಾವೂ ಸಹ ಓದುವ ಸಮಯದಲ್ಲಿ ಪರಿಶ್ರಮದಿಂದ ಓದಿ ಸಾಧನೆ ಮಾಡಬೇಕು ಎಂದರು.
ಇನ್ನೂ ನಮ್ಮ ಸಂಸ್ಥೆ ಸುಮಾರು 15 ವರ್ಷಗಳಿಂದ ಉಚಿತ ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬಂದಿದೆ. ನಮ್ಮ ಕೆಡಿಪಿ ಫೌಂಡೇಷನ್ ನ ಸಂಸ್ಥಾಪಕರಾದ ಅನಿತ ಮತ್ತು ಕಿರಣ್ ಕುಮಾರ್ ರವರು ಸರ್ಕಾರಿ ಶಾಲೆಗಳಲ್ಲೇ ಓದಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಈ ಅಳಿಲು ಸೇವೆ ಮಾಡಲಾಗುತ್ತಿದೆ. ಇನ್ನೂ ನಮ್ಮ ಸಂಸ್ಥೆ paropakari.com ಎಂಬ ವೆಬ್ ಸೈಟ್ ಹೊಂದಿದ್ದು, ಅದರ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಬೇಕಾದ ಶೈಕ್ಷಣಿಕ ಪರಿಕರಗಳ ಬಗ್ಗೆ ವಿನಂತಿಯಿಟ್ಟರೇ ಅದನ್ನು ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಮಯದಲ್ಲಿ ಗುಡಿಬಂಡೆ ತಾಲೂಕಿನ ಚೆಂಡೂರು, ದಪ್ಪರ್ತಿ, ಎಲ್ಲೋಡು, ಚೌಟಕುಂಟಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಈ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು