Water Project – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗುಡಿಬಂಡೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿ ಸಹಯೋಗದಲ್ಲಿ 17.36 ಕೋಟಿ ವೆಚ್ಚದ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಮೂಲದಿಂದ ಗುಡಿಬಂಡೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಗಣ್ಯರು ತರಾತುರಿಯಲ್ಲಿ ಮುಗಿಸಿದರು. ಮಳೆಯ ನೆಪವೋ ಅಥವಾ ಬೇರೆ ಕಾರ್ಯಕ್ರಮದ ಉದ್ದೇಶಕ್ಕೋ ವೇದಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
Water Project – ತರಾತುರಿಯಲ್ಲಿ ಮುಗಿದ ಶಂಕುಸ್ಥಾಪನೆ ಕಾರ್ಯಕ್ರಮ
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಮೂಲದಿಂದ ಗುಡಿಬಂಡೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕು ಸ್ಥಾಪನೆ ಕಾರ್ಯಕ್ರಮ ಜು.26 ಮದ್ಯಾಹ್ನ 2.30ಕ್ಕೆ ಗುಡಿಬಂಡೆ ತಾಲೂಕು ಕಚೇರಿ ಆವರಣದಲ್ಲಿ ನಿಗಧಿಪಡಿಸಲಾಗಿತ್ತು. ಆದರೆ ಆಹ್ವಾನ ಪತ್ರಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮಕ್ಕೆ ಬಂದಿದ್ದೇ ತಡವಾಗಿತ್ತು. ಇದರ ಜೊತೆಗೆ ತಾಲೂಕು ಕಚೇರಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಆದರೆ ಮಳೆಯ ಸಿಂಚನದ ಕಾರಣ ತಾಲೂಕು ಕಚೇರಿಯ ಒಳಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಯಿತು. ಆದರೆ ಸಚಿವರು, ಸಂಸಂದರುಗಳು ಸಂಜೆ 5 ಗಂಟೆ ಸುಮಾರಿಗೆ ಗುಡಿಬಂಡೆಗೆ ಆಗಮಿಸಿದರು. ವೇದಿಕೆ ಕಾರ್ಯಕ್ರಮ ನಡೆಸೋಕೆ ತಡವಾಗುತ್ತದೆ. ಬಾಗೇಪಲ್ಲಿಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದು ಹೇಳಿ ಯೋಜನೆಯ ಶಂಕು ಸ್ಥಾಪನೆಯನ್ನು ಮುಗಿಸಿ, ವೇದಿಕೆ ಕಾರ್ಯಕ್ರಮ ರದ್ದುಗೊಳಿಸಿ ಬಾಗೇಪಲ್ಲಿಗೆ ತೆರಳಿದರು.
Water Project – ಜನಪರ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಒತ್ತು
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ, ನಗರಾಭಿವೃದ್ದಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸುಮಾರು 14 ಸಾವಿರ ಕೋಟಿ ವೆಚ್ಚದಲ್ಲಿ ಜನತೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಯೋಜನೆಗಳನ್ನು ರೂಪಿಸಿದೆ. ರಾಜ್ಯದ ಕಟ್ಟಕಡೆಯ ಮನುಷ್ಯರಿಗೂ ನೀರು ಸಿಗಬೇಕೆಂಬ ಉದ್ದೇಶದಿಂದ ಕಾಂಗ್ರೇಸ್ ಸರ್ಕಾರ ಹಲವು ಮಹತ್ವ ಯೋಜನೆಗಳನ್ನು ಜಾರಿ ಗೊಳಿಸಿದೆ. ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಒತ್ತಾಯದಿಂದ ಇಂದು ಕ್ಷೇತ್ರದಲ್ಲಿ 30 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.50 ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಅನುದಾನ ಒದಗಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಹೋಗುವುದು ನಮ್ಮ ರಾಜ್ಯ ಸರ್ಕಾರದ ಟ್ಯಾಕ್ಸ್ ಆಗಿದೆ. ಅನುದಾನ ನೀಡಿದ ಪ್ರಧಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
Read this also : ಸಮರ್ಪಕ ಬಸ್ ವ್ಯವಸ್ಥೆ ಹಾಗೂ ಬಸ್ ಡಿಪೋ ಗಾಗಿ ಸಾಂಕೇತಿಕ ಪ್ರತಿಭಟನೆ: ಇದು ಆರಂಭ ಮಾತ್ರ ಎಂದ ಪ್ರತಿಭಟನಾಕಾರರು
Water Project – ಕಾರ್ಯಕ್ರಮದಲ್ಲಿ ಹಾಜರಿದ್ದವರು
ಈ ವೇಳೆ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಕೆ.ಸುಧಾಕರ್, ಪಪಂ ಅಧ್ಯಕ್ಷ ವಿಕಾಸ್, ಜಿಲ್ಲಾಧಿಕಾರಿ ರವೀಂದ್ರ, ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್ ಸೇರಿದಂತೆ ಪಪಂ ಸದಸ್ಯರುಗಳು, ತಾಲೂಕಿನ ಮುಖಂಡರುಗಳು ಹಾಜರಿದ್ದರು.