Ambedkar Jayanti 2025 – “ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯದ ಮತಗಳ ಮೇಲೆ ಮಾತ್ರ ಕಣ್ಣಿದೆ. ದಲಿತರ ನಿಜವಾದ ಅಭಿವೃದ್ಧಿ ಮತ್ತು ಕಲ್ಯಾಣದ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿಲ್ಲ” ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಅವರು ಗುಡುಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವನ್ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ದಲಿತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಂಡಿದೆ. ಗ್ಯಾರೆಂಟಿಗಳ ಹೆಸರಿನಲ್ಲಿ ಪರಿಶಿಷ್ಟ ಜಾತಿ (ಪ.ಜಾ), ಪರಿಶಿಷ್ಟ ಪಂಗಡ (ಪ.ಪಂ) ಮತ್ತು ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಅನುದಾನ ನೀಡಲು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿ ದಲಿತರಿಗೆ ಅನ್ಯಾಯ ಮಾಡುತ್ತಿದೆ” ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಆರೋಪಿಸಿದರು.

Ambedkar Jayanti 2025 – ಬಿಜೆಪಿ ಸರ್ಕಾರದಲ್ಲಿ ಯಾವುದೇ ತಾರತಮ್ಯವಿರಲಿಲ್ಲ:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ರಾಜ್ಯದ ಯಾವುದೇ ಸಮುದಾಯವನ್ನು ಕಡೆಗಣಿಸಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಕೇವಲ ಮುಸ್ಲಿಂ ಸಮುದಾಯದ ಓಲೈಕೆಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಟೀಕಿಸಿದರು.
Ambedkar Jayanti 2025 – ದಲಿತರ ಅನುದಾನ ತಕ್ಷಣ ಬಿಡುಗಡೆ ಮಾಡಿ:
“ಕಾಂಗ್ರೆಸ್ ಸರ್ಕಾರವು ಜಾತಿಯ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ದಲಿತರಿಗೆ ನೀಡಬೇಕಾಗಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ದಲಿತರಿಗೆ ಮೀಸಲಿಟ್ಟಿರುವ ಹಣವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು” ಎಂದು ಮುನಿರಾಜು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
Ambedkar Jayanti 2025 – ಶಾಸಕರ ವಿರುದ್ಧ ಮುನಿರಾಜು ವಾಗ್ದಾಳಿ:
ಬಾಗೇಪಲ್ಲಿ ಶಾಸಕರು ದಲಿತರ ಜಮೀನುಗಳನ್ನು ಯಾರೂ ಕಸಿದುಕೊಳ್ಳಬಾರದು ಎಂದು ವಿಧಾನಸಭೆಯಲ್ಲಿ ಮಾತನಾಡಿದ್ದಾರೆ. ಆದರೆ, ಅವರೇ ತಮ್ಮ ಕುಟುಂಬದವರ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿಸಿಕೊಂಡಿರುವ ದಾಖಲೆಗಳು ನನ್ನ ಬಳಿ ಇವೆ. ಈ ಅನ್ಯಾಯದ ವಿರುದ್ಧ ನಾನು ಸುಮ್ಮನೆ ಕೂರುವುದಿಲ್ಲ. ದಲಿತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ” ಎಂದು ಶಾಸಕರ ವಿರುದ್ಧ ಮುನಿರಾಜು ವಾಗ್ದಾಳಿ ನಡೆಸಿದರು.

Ambedkar Jayanti 2025 – ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹ:
“ರಾಜಕೀಯ ಶಾಶ್ವತವಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರದ ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ನೀವು ನಿಮ್ಮ ಪಕ್ಷದವರಿಗೆ ಮಾತ್ರ ರಕ್ಷಣೆ ನೀಡುತ್ತಿರುವುದು ಸರಿಯಲ್ಲ” ಎಂದು ಪ್ರಶ್ನಿಸಿದ ಅವರು, ಪಟ್ಟಣದಲ್ಲಿ ತಕ್ಷಣ ಅಂಬೇಡ್ಕರ್ ಭವನ ನಿರ್ಮಾಣ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Read this also : BJP – ಸಂಸದ ಸುಧಾಕರ್ ರವರು ನನಗೆ ಬೆಂಬಲ ನೀಡಿದ್ದರೇ ನಾನು ಶಾಸಕನಾಗುತ್ತಿದ್ದೆ: ಸಿ.ಮುನಿರಾಜು
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಆರ್. ಪ್ರತಾಪ್, ದಲಿತ ಮುಖಂಡರಾದ ಚಿನ್ನಪೂಜಪ್ಪ, ವೆಂಕಟೇಶ್, ಲಕ್ಷ್ಮೀನಾರಾಯಣ್, ಜಯಂತ್ ಹಾಗೂ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.