ಚಂಡಮಾರುತದ ಪರಿಣಾಮ ತಾಲೂಕಿನಾಧ್ಯಂತ ಮಳೆಯಾಗುತ್ತಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯವಿದ್ದು ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆವಹಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಬಾಗೇಪಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ (Local News) ನಡೆದ ತುರ್ತು ಟಾಸ್ಕ್ ಫೋರ್ಸ ಸಭೆಯಲ್ಲಿ ಮಾತನಾಡಿದರು.
ಕಳೆದ 3 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನಿಂದ ನಿರ್ಮಿಸಿರುವ ಮತ್ತು ಕಲ್ಲು ಚಪ್ಪಡಿಗಳನ್ನು ಅಳವಡಿಸಿರುವ ಮನೆಗಳನ್ನು ತಕ್ಷಣವೇ ಎಲ್ಲಾ ಗ್ರಾಪಂ ಪಿಡಿಓಗಳು ಗುರುತಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಅಂತಹ ಅಪಾಯಕಾರಿ ಮನೆಗಳಲ್ಲಿ ವಾಸವಿರುವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಅದೇ ರೀತಿಯಲ್ಲಿ ಸೋರುತ್ತಿರುವ ಶಾಲೆ ಮತ್ತು ಅಂಗನವಾಡಿಗಳಲ್ಲಿನ ವಿದ್ಯಾರ್ಥಿಗಳನ್ನು ಅಲ್ಲಿಂದ ತೆರವು ಮಾಡಿ ಸಮೀಪದ ಶಾಲೆಗಳಲ್ಲಿ ಇರುವಂತೆ ವ್ಯವಸ್ಥೆಯನ್ನು ಮಾಡಿ ಎಂದು ತಿಳಿಸಿದ ಶಾಸಕರು ತಮಗೆ ಇರುವ ಮಾಹಿತಿಯ ಪ್ರಕಾರ 4-5 ಅಂಗನವಾಡಿ ಕಟ್ಟಡಗಳು ಕಲ್ಲುಚಪ್ಪಡಿಯಿಂದ ನಿರ್ಮಿಸಿದವಾಗಿದ್ದು ತಕ್ಷಣವೇ ಮಕ್ಕಳನ್ನು ಅಲ್ಲಿಂದ ಸ್ಥಳಾಂತರಿಸಿ ಎಂದು ಬಿಇಓ ಎನ್.ವೆಂಕಟೇಶಪ್ಪ ಮತ್ತು ಸಿಡಿಪಿಓ ರಾಮಚಂದ್ರಗೆ ಸೂಚಿಸಿದರು.
ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಪಟ್ಟಣದ ಮುಖ್ಯ ರಸ್ತೆ ನಿರ್ಮಾಣ ಮಾಡಲಾಗಿದೆ ಆದರೆ ಅಂಗಡಿ ವ್ಯಾಪಾರಸ್ಥರು ಲೋಡುಗಟ್ಟಲೆ ಮಣ್ಣು ಸುರಿದು ಟಾರ್ ರಸ್ತೆಯನ್ನು ಮಣ್ಣಿನ ರಸ್ತೆಯನ್ನಾಗಿ ಪರಿವರ್ತಿಸುತ್ತಿದ್ದಾರೆ. ಈ ಬಗ್ಗೆ ನಿತ್ಯವೂ ಸಾರ್ವಜನಿಕರು ನನಗೆ ಪೋನ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಪಟ್ಟಣದ ಟಿಬಿ ಕ್ರಾಸ್ ಬಳಿಯಿಂದ ಎಪಿಎಂಸಿ ಮಾರುಕಟ್ಟೆ ವರೆಗೆ ಚರಂಡಿಗಳನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿರುವ ಪರಿಣಾಮ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ ಈ ಸಂಬಂಧ ನೀವು ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಸ್ಪಂಧಿಸಿದ ತಾಪಂ ಇಓ ರಮೇಶ್ ಮತ್ತು ಲೋಕೋಪಯೋಗಿ ಎಇಇ ಪ್ರದೀಪ್ ನಾಳೆಯಿಂದಲೇ ಕಾರ್ಯಾಚರಣೆ ನಡೆಸಿ ಟಾರ್ ರಸ್ತೆಗೆ ಹಾಕಿರುವ ಮಣ್ಣು ತೆರವುಗೊಳಿಸಿ ಚರಂಡಿಗಳನ್ನು ನೀರು ಹರಿಯುವಂತೆ ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಮಳೆಯಿಂದ ಬೆಳೆಗಳು ಹಾನಿಯಾದರೆ ಅದಕ್ಕೆ ಪರಿಹಾರ ದೊರೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಎಡಿಎ ಲಕ್ಷ್ಮೀರವರಿಗೆ ಸೂಚಿಸಿದರು. ವಿದ್ಯುತ್ ಅಪಘಡಗಳು ಸಂಭವಿಸದಂತೆ ಮತ್ತು ಕುಡಿಯುವ ನೀರು ಪೂರೈಕೆಗೆ ತೊಂದರೆಆಗದ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ಬೆಸ್ಕಾಂ ಎಇಇ ಸೋಮಶೇಖರ್ ರವರಿಗೆ ತಿಳಿಸಿದರು. ಪಟ್ಟಣದಲ್ಲಿ ಚರಂಡಿ ನೀರು ಮನೆಗಳಿಗೆ ಹರಿಯದಂತೆ ಎಚ್ಚರಿಕೆ ವಹಿಸಬೇಕು, ಅಸಮರ್ಪಕ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ರವರಿಗೆ ಸೂಚಿಸಿದರು.
ಸಭೆಯಲ್ಲಿ ಬಾಗೇಪಲ್ಲಿ ತಹಶೀಲ್ದಾರ್ ಮನೀಷ್ ಎನ್ ಪತ್ರಿ, ಚೇಳೂರು ತಹಶೀಲ್ದಾರ್ ಶ್ರೀನಿವಾಸುಲು ನಾಯ್ಡು, ತಾಪಂ ಇಓ ಎಂ.ವಿ.ರಮೇಶ್, ಬಿಇಓ ಎನ್.ವೆಂಕಟೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಎಡಿಎ ಲಕ್ಷ್ಮೀ, ಬೆಸ್ಕಾಂ ಎಇಇ ಸೋಮಶೇSರ್, ಸಿಡಿಪಿಓ ರಾಮಚಂದ್ರ, ಎನ್.ಶಿವಪ್ಪ ಮತ್ತಿತರ ಅಧಿಕಾರಿಗಳು ಇದ್ದರು.