ತಾಲೂಕಿನಲ್ಲಿ ಇತ್ತೀಚಿಗೆ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಪ್ರಕರಣಗಳನ್ನು ತಡೆಯಲು ಎಲ್ಲರೂ ಸಹಕಾರ ನೀಡಬೇಕು. ಈ ಕುರಿತು ದಲಿತ (Local News) ಕಾಲೋನಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಲಿತ ಮುಖಂಡರ ಕುಂದುಕೊರತೆ (Local News) ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ಪೋಕ್ಸೋ ಪ್ರಕರಣಗಳಲ್ಲಿ ದಲಿತ ಕಾಲೋನಿಗಳ 18 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ಜನ ಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಲಾಗುವುದು. ಈ ಕೆಲಸಕ್ಕೆ ಸ್ಥಳೀಯ ಜನರೂ ಸಹ ಸಹಕಾರ ನೀಡಬೇಕು. ಈ ರೀತಿಯ ಅನಿಷ್ಟ ಪದ್ದತಿಗಳ ತಡೆಗೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಾರ್ವಜನಿಕರೂ ಸಹ ಸಹಕಾರ ನೀಡಿದಾಗ ಸಮಾಜದಿಂದ ಬಾಲ್ಯ ವಿವಾಹದಂತಹ ಪದ್ದತಿಗಳನ್ನು ನಿರ್ಮೂಲನೆ ಮಾಡಬಹುದು ಎಂದರು.
ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ದ ದಲಿತ ಮುಖಂಡರ ಆಕ್ರೋಷ:
ಇನ್ನೂ ಸಭೆಯಲ್ಲಿದ್ದ ದಲಿತ ಮುಖಂಡರುಗಳು ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಷ ಹೊರಹಾಕಿದರು. ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಕೆಲವೊಂದು ಗ್ರಾಮಗಳಲ್ಲಿ 8ನೇ ತರಗತಿಯ ಮಕ್ಕಳೂ ಸಹ ಮದ್ಯ ಸೇವಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಅಕ್ರಮ ಮದ್ಯ ಮಾರಾಟ. ಗುಡಿಬಂಡೆ ಪಟ್ಟಣದಲ್ಲಿ ಬೆಳಗಿನಿಂದಲೇ ಮದ್ಯ ಮಾರಾಟ ಶುರುವಾಗುತ್ತದೆ. ಹಾಲು ಸಿಗುವುದಕ್ಕೂ ಮುಂಚೆಯಿಂದಲೇ ಮದ್ಯ ಸಿಗುತ್ತದೆ. ಇವೆಲ್ಲಾ ನಡೆಯುತ್ತಿದ್ದರೂ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ತಮಗೆ ಏನೂ ಸಂಬಂಧವಿಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಈ ಅಕ್ರಮ ಮದ್ಯ ಮಾರಾಟದಿಂದ ಹೆಚ್ಚಾಗಿ ದಲಿತರೇ ಬಲಿಯಾಗುತ್ತಿದ್ದು, ಈ ಕುರಿತು ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅಬಕಾರಿ ಇಲಾಖೆ, ಪೊಲೀಸರು ಅರಿವು ಮೂಡಿಸುವ ಕೆಲಸ ಮಾಡಬೇಕು. ಅದಕ್ಕೆ ನಾವೂ ಸಹ ಸಹಕಾರ ನೀಡುತ್ತೇವೆ ಎಂದು ದಲಿತ ಮುಖಂಡರು ತಿಳಿಸಿದರು.
ಜೀತವಿಮುಕ್ತಿ ಪತ್ರ ಪಡೆದ ಜೀತ ವಿಮುಕ್ತರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕು. ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಬೇಕು. ಸರ್ಕಾರ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಗ್ರಾಮ ಮಟ್ಟದಲ್ಲಿ ದಲಿತ ಕುಂದು ಕೊರತೆ ಸಭೆ ಮಾಡಬೇಕು. ಬಾಲ್ಯ ವಿವಾಹಗಳ ಕುರಿತು ಜಾಗೃತಿ ಮೂಡಿಸಬೇಕು. ಪೌರ ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು. ಕೆಲವು ವರ್ಷಗಳ ಹಿಂದೆ ಪೌರ ಕಾರ್ಮಿಕರು ವಾಸವಿ ಸೌರ್ಹಾದ್ರ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡಿದ್ದು, ಆ ಸಾಲವನ್ನು ತಮ್ಮ ಸಂಬಳದಲ್ಲಿ ಕಡಿತ ಮಾಡಿದ್ದರೂ ಇನ್ನೂ ಆ ಸಾಲ ಮರುಪಾವತಿಯಾಗದೇ ನೊಟೀಸ್ ನೀಡಲಾಗುತ್ತಿದೆ. ಇದರಲ್ಲಿ ಗುಡಿಬಂಡೆ ಪಟ್ಟಣ ಪಂಚಾಯತಿ ಅಧಿಕಾರಿಗಳ ಕೈವಾಡವಿದ್ದು, ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಲಾಯಿತು.
ಇನ್ನೂ ಸಭೆಯಲ್ಲಿ ಮತಷ್ಟು ದೂರುಗಳು ಕೇಳಿಬಂದಿದ್ದು, ಈ ಪೈಕಿ ಪೊಲೀಸ್ ಠಾಣೆ ಸೋರುತ್ತಿದ್ದು, ಅದಕ್ಕೆ ಅನುದಾನ ನೀಡುವುದು, ಕೃಷಿ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು ಅದಕ್ಕೆ ಪರಿಹಾರ ಒದಗಿಸುವುದು, ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕೆಲವೊಂದು ವಿಚಾರಗಳ ಬಗ್ಗೆ ಅರಿವು ಮೂಡಿಸುವುದು, ಪುಂಡ ಪೋಕಿರಿಗಳಿಗೆ ಕಡಿವಾಣ ಹಾಕುವುದು, ವಿವಿಧ ಗ್ರಾಮಗಳಲ್ಲಿ ದಲಿತರಿಗೆ ನಿವೇಶನ ನೀಡುವುದು, ದಲಿತರಿಗೆ ಸ್ಮಶಾನಕ್ಕೆ ಭೂಮಿ ಒದಗಿಸುವುದು, ಸೋಮಲಾಪುರದಲ್ಲಿ ದಲಿತರಿಗೆ ಜಮೀನು ನೀಡುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಲಾಯಿತು.
ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ನಡೆದ ದಲಿತ ಕುಂದು ಕೊರತೆಗಳ ಸಭೆ ಇದೇ ಮೊದಲ ಬಾರಿಗೆ ಅರ್ಥಪೂರ್ಣವಾಗಿ ಹಾಗೂ ಉಪಯುಕ್ತವಾಗಿ ನಡೆದಿದೆ ಎಂದು ದಲಿತ ಮುಖಂಡರು ತಿಳಿಸಿದರು. ಇದೇ ಸಮಯದಲ್ಲಿ ಬಾಲ್ಯ ವಿವಾಹ ತಡೆಯ ಪ್ರತಿಜ್ಞಾ ವಿಧಿಯನ್ನು ಬೋದಿಸಲಾಯಿತು. ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಜಾಗೃತಿ ಸಮಿತಿಯ ನರೇಂದ್ರ, ರತ್ನಮ್ಮ, ದಲಿತ ಮುಖಂಡರಾದ ನಾರಾಯಣಸ್ವಾಮಿ, ಪ್ರೆಸ್ ಸುಬ್ಬರಾಯಪ್ಪ, ರಾಮಾಂಜನೇಯ, ಅಮರಾವತಿ, ನಂಜುಂಡ, ಚೆಂಡೂರು ರಾಮಾಂಜಿ, ಕದಿರಪ್ಪ, ಈಶ್ವರಪ್ಪ ಸೇರಿದಂತೆ ಹಲವರು ಇದ್ದರು.