ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ರಾಜ್ಯದ ವಿವಿಧ ಕಡೆ ಭಾರಿ ಮಳೆಯಾಗುತ್ತಿದೆ. ನಿನ್ನೆ ಸಂಜೆ ವೇಳೆ ಬೆಂಗಳೂರಿನಲ್ಲಿ (Bangalore Rains) ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಬೆಳಿಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಭಾರಿ ಮಳೆಯಾಗಿದೆ. ಈ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ನಿನ್ನೆ ಶನಿವಾರ ಆದ ಕಾರಣ ಬೆಂಗಳೂರಿನಿಂದ ಊರಿಗೆ ತೆರಳುವಂತಹ ಜನರೂ ಸಹ ಪರದಾಡಬೇಕಾದ ಸ್ಥಿತಿ ಎದುರಾಗಿತ್ತು. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ ಹಲವು ಕಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ಸಹ ನೀಡಿದೆ.
ಶನಿವಾರ ಸಂಜೆ ಬೆಂಗಳೂರಿನ ಹಲವು ಕಡೆ ಭಾರಿ ಮಳೆಯಾಗಿದೆ. ಬೆಂಗಳೂರಿನ ಟೌನ್ ಹಾಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ, ಕಾರ್ಪೋರೇಷನ್ ಸರ್ಕಲ್ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿತ್ತು. ಜೊತೆಗೆ ಅಲ್ಲಲ್ಲಿ ಟ್ರಾಫಿಕ್ ಜಾಮ್ ಸಹ ಹೆಚ್ಚಾಗಿತ್ತು. ಇನ್ನೂ ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳು ಹಾಗೂ ವಿಡಿಯೋಗಳೂ ಸಹ ವೈರಲ್ ಆಗಿವೆ. ಜೊತೆಗೆ ಅನೇಕರು ಮಳೆ ಬಂದರೇ ಬೆಂಗಳೂರಿನಲ್ಲಿ ಇದೇ ರೀತಿಯ ಸಮಸ್ಯೆ ಎದುರಿಸಬೇಕಾಗುತ್ತಿದೆ. ಈ ಸಂಬಂಧ ಸರ್ಕಾರ ಸರಿಯಾದ ಕ್ರಮ ವಹಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಇನ್ನೂ ಹವಾಮಾನ ಇಲಾಖೆಯ ಎಚ್ಚರಿಕೆಯಂತೆ ಅ.8 ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಿದೆ. ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಅ.9 ರವರೆಗೆ ಮಳೆ ಹೆಚ್ಚಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು, ದಾವಣಗೆರೆ ಜಿಲ್ಲೆ, ಚಿಕ್ಕಮಂಗಳೂರು, ಹಾಸನ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಬಳ್ಳಾರಿ, ಕೋಲಾರ, ರಾಮನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದ್ದು ಎಲ್ಲೋ ಅಲರ್ಟ್ ನೀಡಿದೆ. ಇನ್ನೂ ಮೈಸೂರು ದಸರಾ ಉತ್ಸವ ಅದ್ದೂರಿಯಾಗಿ ಆರಂಭಗೊಂಡಿದೆ. ಆದರೆ ನವರಾತ್ರಿ ಹಬ್ಬ ಆಚರಣೆಯ ನಡುವೆ ಮಳೆಯ ಕಿರಿಕಿರಿ ಸಹ ಎದುರಾಗುತ್ತಿದೆ.