ಮಕ್ಕಳ ಸಾಧನೆಗೆ ಶಿಕ್ಷಣ ಎಷ್ಟು ಮುಖ್ಯವೋ ಮಕ್ಕಳಿಗೆ ಪೌಷ್ಠಿಕ ಆಹಾರವೂ ಸೇವನೆ ಸಹ ಅಷ್ಟೇ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವಂತಹ ಆನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಅವರು ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯ ಆವರಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ವಾರಕ್ಕೆ ಎರಡು ದಿನ ಮೊಟ್ಟೆ ವಿತರಿಸಲಾಗುತ್ತಿತ್ತು. ಅಜೀಂ ಪ್ರೇಮ್‍ಜಿ ಅವರು ತಮ್ಮ ಪ್ರತಿಷ್ಠಾನದಿಂದ ಇನ್ನುಳಿದ ನಾಲ್ಕು ದಿನವೂ ಮೊಟ್ಟೆ ವಿತರಿಸುವ ಯೋಜನೆಗೆ ಸರ್ಕಾರದೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಯೋಜನೆಯಿಂದಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸುಮಾರು 55 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರೆಯಲಿದೆ. ಸರ್ಕಾರಿ ಶಾಲೆಯ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಕೊರತೆಯಿಂದ ಶೈಕ್ಷಣಿಕವಾಗಿ ಹಿನ್ನಡೆಯಾಗುವುದನ್ನು ತಪ್ಪಿಸುವ ಹಾಗೂ ಸರ್ಕಾರಿ ಶಾಲೆ ಮಕ್ಕಳು ಸಹ ಉತ್ತಮ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಆರಂಭಿಸಿದೆ ಎಂದ ಅವರು ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸರ್ಕಾರದ ಸೌಲಭ್ಯಗಳ ಜೊತೆಗೆ ವೈಯಕ್ತಿಕವಾಗಿ ನೆರವು ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮನೀಷಾ ಮಹೇಶ್ ಪತ್ರಿ, ತಾಪಂ ಇಓ ಎಂ.ವಿ. ರಮೇಶ್, ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ಆರ್ ವರ್ಣಿ, ಬಿ.ಆರ್.ಸಿ ಸಮನ್ವಯಾಧಿಕಾರಿ ಆರ್.ವೆಂಕಟರಾವಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಹನುಮಂತ ರೆಡ್ಡಿ, ಪ್ರಾಶಾಶಿ ಸಂಘದ ಉಪಾಧ್ಯಕ್ಷೆ ಪ್ರಭಾವತಿ, ಮುಖ್ಯ ಶಿಕ್ಷಕ ಕೆ.ವಿ.ಆದಿನಾರಾಯಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ, ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ಧರಖಾಸ್ತು ಸಮಿತಿ ಸದಸ್ಯ ಲಕ್ಷ್ಮೀ ನರಸಿಂಹಪ್ಪ, ಬಿ.ಆರ್.ಪಿ ಶಿವಪ್ಪ, ಉಮಾದೇವಿ, ವೈ.ಎಂ.ಮಂಜುನಾಥ್, ಆದಿರೆಡ್ಡಿ, ಮತ್ತಿತರರು ಇದ್ದರು.