ಸದ್ಯ ಮಳೆಗಾಲವಾಗಿದ್ದು, ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಹಾವು (Snake) ಸೇರಿದಂತೆ ಕೆಲವೊಂದು ವಿಷ ಜಂತುಗಳು ಮನೆಯೊಳಗೆ ಸೇರುತ್ತಿವೆ. ಬೆಚ್ಚಗೆ ಇರುವಂತಹ ಸ್ಥಳಗಳನ್ನು ಹುಡುಕಿಕೊಂಡು ಬರುತ್ತಾ, ಕಾರು, ಬೈಕ್, ಶೂಗಳು, ಹೆಲ್ಮೇಟ್ ಸೇರಿದಂತೆ ಹಲವು ಕಡೆ ಅವಿತುಕೊಂಡಿರುತ್ತವೆ. ಅಂತಹುದೇ ಘಟನೆಯೊಂದು ಉಡುಪಿ ಯಲ್ಲಿ (Udupi News) ನಡೆದಿದ್ದು, ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಇಟ್ಟಿದ್ದಂತಹ ಹೂಕೋಸಿನಲ್ಲಿ ಹಾವಿನ ಮರಿ ಕಾಣಿಸಿಕೊಂಡಿದ್ದು, ಮನೆ ಮಂದಿ ಹೌಹಾರಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಕರ್ನಾಟಕದ ಉಡುಪಿ (Udupi News) ಜಿಲ್ಲೆಯ ಕಾಪು ತಾಲೂಕಿನ ವ್ಯಾಪ್ತಿಯ ಪಡುಬಿದ್ರೆಯ ಬೇಂಗ್ರೆ ಎಂಬ ಪ್ರದೇಶದ ವಾಸಿಯೊಬ್ಬರು ತಮ್ಮ ಮನೆಯ ಫ್ರಿಡ್ಜ್ ನಲ್ಲಿ ತರಕಾರಿಯನ್ನು ಇಟ್ಟಿದ್ದರು. ಎಂದಿನಂತೆ ಅಡುಗೆ ಮಾಡಲು ಫ್ರಿಡ್ಜ್ ನಲ್ಲಿದ್ದ ತರಕಾರಿಯನ್ನು ತೆಗೆದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಆಕೆ ಫ್ರಿಡ್ಜ್ ನಲ್ಲಿದ್ದ ಹೂಕೋಸನ್ನು ತೆಗೆದು ಕಟ್ ಮಾಡಲು ಹೋಗಿದ್ದಾರೆ. ಈ ವೇಳೆ ಹೂಕೋಸಿನ ಒಳಭಾಗದಿಂದ ಹಾವಿನ ಮರಿ ಹೊರಗೆ ಬಂದಿದೆ. ಕೂಡಲೇ ಮಹಿಳೆ ಹೌಹಾರಿದ್ದಾರೆ. ಕೈಯಲ್ಲಿದ್ದ ತರಕಾರಿಯನ್ನು ಎಸೆದು ಹೊರಕ್ಕೆ ಓಡಿ ಹೋಗಿದ್ದಾರೆ. ಬಳಿಕ ಹಾವಿರುವ ಮಾಹಿತಿಯನ್ನು ಉರಗ ತಜ್ಞರಿಗೆ ತಿಳಿಸಿದ್ದಾರೆ. ಅಲ್ಲಿಗೆ ಬಂದ ಉರಗ ತಜ್ಞ ಹಾವನ್ನು ರಕ್ಷಿಸಿ ಕಾಡಿಗೆ ಸುರಕ್ಷಿತವಾಗಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಹಾವನ್ನು ಹೆಬ್ಬಾವಿನ ಮರಿ ಎಂದು ಉರಗ ತಜ್ಞರು ಗುರ್ತಿಸಿದ್ದಾರೆ. ಮಳೆಗಾಲದ ಸಮಯದಲ್ಲಿ ಹಾವು ಸೇರಿದಂತೆ ಕೆಲವೊಂದು ವಿಷ ಜಂತುಗಳು ಮರಿ ಇಡುವಂತಹ ಸಮಯದಲ್ಲಿ ಸುರಕ್ಷಿತವಾದ ಪ್ರದೇಶವನ್ನು ಹುಡುಕುತ್ತವೆ. ಅದೇ ರೀತಿ ಮರಿ ಹೂಕೋಸಿನ ಒಳಗೆ ಅವಿತುಕೊಂಡಿರಬಹುದು ಎನ್ನಲಾಗಿದ್ದು, ತರಕಾರಿ ಖರೀದಿ ಮಾಡುವಾಗ ಹಾಗೂ ಬಳಸುವಾಗ ತುಂಬಾ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಕೆಲ ಸ್ಥಳೀಯರು ಸಲಹೆ ನೀಡಿದ್ದಾರೆ. ಈ ಹಿಂದೆ ಸಹ ಕೆಲವೊಂದು ಪ್ರದೇಶಗಳಲ್ಲಿ ಶೂ, ಬೈಕ್, ಕಾರುಗಳು, ಅಡುಗೆ ಕೋಣೆಗಳಲ್ಲಿ ಹಾವು ಅವಿತುಕೊಂಡಿರುವ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ.