ರಾಜ್ಯದಲ್ಲಿ ಡೆಂಗ್ಯೂ ಜ್ವರದ (Dengue Update) ಆರ್ಭಟ ಜೋರಾಗಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಮೈಸೂರು ಜಿಲ್ಲೆಯಲ್ಲೂ ಸಹ ಡೆಂಗ್ಯೂ ಭೀತಿ ಹೆಚ್ಚಾಗಿದ್ದು, ಸೋಂಕಿಗೆ ಎರಡನೇ ಬಲಿಯಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂಇದೆ. ಇನ್ನೂ ಡೆಂಗ್ಯೂ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಕ್ತಾ ಇಲ್ವಾ ಎಂಬ ಭಯ ಸಹ ಜನರಲ್ಲಿ ಕಾಡುತ್ತಿದೆ. ಆದ್ದರಿಂದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. 35 ಮಂದಿ ಈ ಸೋಂಕಿಗೆ ತುತ್ತಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಹುಣಸೂರು ಸಮುದಾಯ ಆರೋಗ್ಯಾಧಿಕಾರಿ ಡೆಂಗ್ಯೂಗೆ ಬಲಿಯಾಗಿದ್ದರು. ಇದೀಗ ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಲಲಿತಾ ಎಂಬುವವರು ಡೆಂಗ್ಯೂಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 301 ಪ್ರಕರಣಗಳು ಸಕ್ರೀಯವಾಗಿದೆ. ಒಂದೇ ದಿನದಲ್ಲಿ 159 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈವೆರೆಗಿನ ಪ್ರಕರಣಗಳ ಸಂಖ್ಯೆ ಒಟ್ಟು 7165 ಇದೆ ಎನ್ನಲಾಗಿದ್ದು, ಸಾವಿನ ಸಂಖ್ಯೆ 6ಕ್ಕೇರಿದೆ.
ಇನ್ನೂ ಭಾನುವಾರ ಬೆಂಗಳೂರಿನಲ್ಲಿ 166 ಡೆಂಘೀ ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ತಿಳಿದುಬಂದಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಬೆಂಗಳೂರಿನಲ್ಲಿ ಕಳೆದ 6 ದಿನದಲ್ಲಿ ಒಟ್ಟು 849 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು ನಗರದಲ್ಲಿ ಒಟ್ಟು 1988 ಪ್ರಕರಣಗಳು ದೃಢಪಟ್ಟಿವೆ. ಇನ್ನೂ 130 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಸಾರ್ವಜನಿಕರು ಡೆಂಗ್ಯೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ.