ಗುಡಿಬಂಡೆ: ಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಹಾರ ಡಾ.ಬಾಬು ಜಗಜೀವನರಾಂ (Dr.Babu Jagajeevanram) ರವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ತಹಸೀಲ್ದಾರ್, ತಾ.ಪಂ. ಇಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿಯಾಗಿದ್ದು, ಬಾಬು ಜಗಜೀವನರಾಂ ರವರಿಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಮುಖಂಡ ಜಿ.ವಿ.ಗಂಗಪ್ಪ ಆಕ್ರೋಷ ಹೊರಹಾಕಿದರು.
ತಾಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಾಬು ಜಗಜೀವನರಾಂ ರವರು ದಲಿತ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದಂತಹ ಮಹಾನ್ ವ್ಯಕ್ತಿ. ಅವರ ಆದರ್ಶಗಳು, ಆಡಳಿತದ ಕಾರ್ಯವೈಖರಿ ಇಂದಿನ ಎಲ್ಲರಿಗೂ ಮಾದರಿಯಾಗಿದೆ. ಆದರೆ ತಾಲೂಕು ಆಡಳಿತ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕಾಗಿತ್ತು. ಮೀಟಿಂಗ್ ಇದೆ ಎಂದು ಕೆಲ ಅಧಿಕಾರಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅದೇ ಶಾಸಕರ ಕಾರ್ಯಕ್ರಮವಿದ್ದರೇ ಅನುಮತಿ ಪಡೆದು ಹಾಜರಾಗುತ್ತಿದ್ದರು. ಈಗಾಗಲೇ ದಲಿತ ಮಹನೀಯರನ್ನು ಮೂಲೆಗುಂಪು ಮಾಡಲಾಗಿದೆ. ಇದೀಗ ಅವರ ಜಯಂತಿಗಳನ್ನೂ ಸಹ ಸರಿಯಾಗಿ ಆಚರಣೆ ಮಾಡದೇ ಅಪಮಾನ ಎಸಗುತ್ತಿದ್ದಾರೆ. ಇಂದಿನ ಯುವಜನತೆ ಈ ಕುರಿತು ಪ್ರಶ್ನೆ ಮಾಡಬೇಕು. ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳದೇ ಇದ್ದರೇ ಪುನಃ ಶೋಷಣೆ, ಅಸ್ಪೃಷ್ಯತೆಗಳಂತಹವು ಹುಟ್ಟುತ್ತವೆ. ದೇಶ ನಾಶವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಳಿಕ ಕಸಾಪ ತಾಲೂಕು ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, ಡಾ.ಬಾಬು ಜಗಜೀವನರಾಂ ರವರು ಮನೆಯಿಂದಲೇ ಒಳ್ಳೆಯ ಪಾಠ ಕಲಿತು ಬಂದಂತಹವರು, ತಮ್ಮ ತಂದೆಯ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದರು. ಅವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು. ಶಾಲಾ ಹಂತದಲ್ಲಿಯೇ ಅವರು ಅಸ್ಪೃಶ್ಯತೆಯ ಬಗ್ಗೆ ಹೊರಾಡಿದಂತಹವರು. ಆದರೆ ಇಂದಿನ ರಾಜಕಾರಣಿಗಳು ತಾವು, ತಮ್ಮ ಮಕ್ಕಳು, ತಮ್ಮ ವಂಶ ಎಂದು ಆಸ್ತಿ ಮಾಡಿಕೊಂಡು ಸಾಗುತ್ತಿದ್ದಾರೆಯೇ ವಿನಃ ದೇಶದ ಅಭಿವೃದ್ದಿ, ಸಮುದಾಯದ ಅಭಿವೃದ್ದಿಯತ್ತ ಗಮನ ಹರಿಸುತ್ತಿಲ್ಲ. ಇನ್ನೂ ಜಗಜೀವನರಾಂ ರವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿದಂತವರು. ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ ಅವರ ಜಯಂತಿ, ಪುಣ್ಯ ಸ್ಮರಣೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ವಿಷಾದನೀಯವಾದ ಸಂಗತಿ ಎಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಪಶು ಸಂಗೋಪನಾ ಇಲಾಖೆಯ ರವಿಚಂದ್ರರೆಡ್ಡಿ, ಪ.ಪಂ. ಆರೋಗ್ಯ ನಿರೀಕ್ಷಕ ಶಿವಣ್ಣ, ಬೆಸ್ಕಾಂ ಇಲಾಖೆಯ ಸದಾಶಿವಪ್ಪ, ದಲಿತ ಸಂಘಟನೆಗಳ ಮುಖಂಡರಾದ ರಾಜು, ಈಶ್ವರಪ್ಪ, ಇಸ್ಕೂಲಪ್ಪ, ನರಸಿಂಹಪ್ಪ ಸೇರಿದಂತೆ ಹಲವರಿದ್ದರು.