ಬಾಗೇಪಲ್ಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾದದ್ದು ಜೊತೆಗೆ ಡಿಜಿಟಿಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ವೇಗವಾಗಿ ತಲುಪಿಸುವಂತಹ ಕೆಲಸಕ್ಕೆ ಮುಂದಗಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ದೇವರಾಜ್ ಅರಸು ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಪೋಷಣ್ ಅಭಿಯಾನದ (Poshan Abhiyana) ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಹ್ಯಾಂಡ್‍ಸೆಟ್, ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಆರೋಗ್ಯ ಕಿಟ್‍ಗಳನ್ನು ವಿತರಿಸಿ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರವಾದ ಸಮೀಕ್ಷೆ ಸೇರಿದಂತೆ ವಿವಿಧ ಕಾರ್ಯಗಳನ್ನ ಸಕಾಲಕ್ಕೆ ನಿಖರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಸರ್ಕಾರದ ಅನೇಕ ಯೋಜನೆಗಳ ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದ ಅವರು ಡಿಜಿಟಿಲ್ ತಂತ್ರಜ್ಞಾನ ಬಳಸಿಕೊಂಡು ನಾಡಿನ ಅಭಿವೃದ್ದಿಗೆ ಕೈಜೋಡಿಸಬೇಕೆಂದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ವಿ.ರಾಮಚಂದ್ರ ಮಾತನಾಡಿ, ಪೋಷಣ್ ಅಭಿಯಾನದಡಿಯಲ್ಲಿ ತಾಲೂಕಿನ 384 ಅಂಗನವಾಡಿ ಕಾರ್ಯಕರ್ತೆಯರಿಗೆ, ಮೇಲ್ವಿಚಾರಕಿಯರಿಗೆ ಮೊಬೈಲ್ ಹ್ಯಾಂಡ್ ಸೆಟ್‍ಗಳು, 570 ಭಾಗ್ಯಲಕ್ಷ್ಮೀ ಬಾಂಡ್‍ಗಳು ಹಾಗೂ 384 ಆರೋಗ್ಯ ಕಿಟ್‍ಗಳನ್ನು ವಿತರಿಸಲಾಗಿದೆ ಎಂದ ಅವರು ಪೋಷಣ್ ಟ್ರ್ಯಾಕರ್ ಅಯಪ್‍ನಲ್ಲಿ ಕೇಂದ್ರಗಳ ದೈನಂದಿನ ಚಟುವಟಿಕೆ, ಗರ್ಭಿಣಿ, ಬಾಣಂತಿ, ಮಕ್ಕಳ ಹಾಜರಾತಿ, ಬೆಳಗಿನ ಉಪಹಾರ, ಮಧ್ಯಾಹ್ನದ ಬಿಸಿಯೂಟ, ಮನೆಗಳಿಗೆ ಬೇಟಿ ನೀಡಿದ ವಿವರಗಳನ್ನು ನಿತ್ಯವೂ ಅಳವಡಿಸುವುದು ಕಡ್ಡಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಟಿ ಹೆಚ್ ಓ ಡಾ.ಸತ್ಯನಾರಾಯಣರೆಡ್ಡಿ, ಪಕ್ಷದ ಮುಖಂಡರಾದ ರಘುನಾಥರೆಡ್ಡಿ, ನರಸಿಂಹಪ್ಪ, ಬಿ.ವಿ.ವೆಂಕಟರವಣ, ಮೇಲ್ವಿಚಾರಕಿ ಅನಸೂಯಬಾಯಿ, ಬಸವ್ವ, ಚೈತನ್ಯ, ರಾಧಿಕ, ಸುಜಾತ ಮತ್ತಿತರರು ಇದ್ದರು.