ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಪೆಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಮಾರಪ್ಪರೆಡ್ಡಿ, ಹಾಗೂ ಉಪಾಧ್ಯಕ್ಷರಾಗಿ ಕೆ. ವೆಂಕಟರಮಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ತಿರುಮಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸೊಸೈಟಿಯ ನಿರ್ದೇಶಕರ ಆಯ್ಕೆಗಾಗಿ ಜೂ. 23 ರಂದು ನಡೆದಿದ್ದ ಚುನಾವಣೆಯಲ್ಲಿ12 ಜನ ನಿರ್ದೇಶಕರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದು, ಜು.1 ರಂದು ನಿಗದಿಯಾಗಿದ್ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಿ. ಮಾರಪ್ಪರೆಡ್ಡಿ ಮಾತನಾಡಿ ಡೈರಿ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಸಹಕಾರದಿಂದ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ , ಒಕ್ಕೂಟದಿಂದ ಬರುವ ಎಲ್ಲಾ ಸವಲತ್ತುಗಳನ್ನು ಸಂಘದ ಎಲ್ಲಾ ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸವನ್ನು ನಿರ್ದೇಶಕರೆಲ್ಲರೂ ಸೇರಿ ಮಾಡುತ್ತೇವೆಂದು ತಿಳಿಸಿದರು. ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಹೈನುಗಾರರ ಶ್ರೇಯೋಭಿವೃಧ್ಧಿಗೆ ದುಡಿಯುತ್ತೇನೆ. ಮುಂದಿನ ಐದು ವರ್ಷ ಹೈನುಗಾರರಿಗೆ ತಲುಪಬೇಕಾದ ಸೌಲಭ್ಯಗಳನ್ನು ತಲುಪಿಸಿ, ಹಾಲು ಉತ್ಪಾದನೆ ಕಡೆ ಹೆಚ್ಚು ಗಮನ ನೀಡಿ ಹೈನುಗಾರರು ಆರ್ಥಿಕವಾಗಿ ಅಭಿವೃಧ್ಧಿ ಹೊಂದುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೆಮ್ಮನಹಳ್ಳಿ ಗ್ರಾಮದ ಮುಖಂಡ ಹಾಗೂ ಮಾಜಿ ತಾಪಂ ಸದಸ್ಯರಾದ ಬಿ.ಎನ್. ದೇವಕುಮಾರ್ ಮಾತನಾಡಿ ಪೆಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಕಳೆದ 30 ವರ್ಷಗಳಿಂದಲೂ ಒಮ್ಮತದಿಂದ ಚುನಾವಣೆ ನಡೆಸದೇ ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು, ಆದರೆ ಈ ಬಾರಿ ಒಮ್ಮತ ಮೂಡದ ಕಾರಣ ಚುನಾವಣೆ ನಡೆಸಲಾಗಿ ತಮ್ಮ ಬೆಂಬಲಿಗರೆಲ್ಲರೂ ಜಯಶೀಲರಾಗಿದ್ದು ಹಾಲು ಉತ್ಪಾದಕರ ಅಭಿವೃದ್ಧಿಗಾಗಿ ಹಾಗೂ ಸಂಘದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಸೂಚಿಸಿದರು. ನಂತರ ಗ್ರಾಮದ ಮುಖಂಡ ಹಾಗೂ ಎಂಪಿಸಿಎಸ್ ಮಾಜಿ ಅಧ್ಯಕ್ಷ ಪಿ.ಸಿ ದೇವರಾಜ್ ಮಾತನಾಡಿ ನೂತನ ಆಡಳಿತ ಮಂಡಳಿಯವರು ಸಂಘದ ಮತ್ತು ರೈತರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ಗಂಗರಾಜು ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸುವಂತೆ, ಹೆಚ್ಚು ಹಾಲನ್ನು ಸಂಘಕ್ಕೆ ಮಾರಾಟ ಮಾಡುವಂತೆ ಮನವಿ ಮಾಡಿದರು. ಪ್ರತಿ ವರ್ಷವೂ ಹಾ.ಉ.ಸ.ಸಂಘದಿಂದ ದೀಪಾವಳಿ ಬೋನಸ್ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ಕಲ್ಪಿಸಿಕೊಡಲು ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ನಾಗರಾಜ್ ಮಾತನಾಡಿ ಗ್ರಾಮಸ್ಥರು ಹಾಗೂ ಸದಸ್ಯರು ಒಗ್ಗಟ್ಟಾಗಿ ಹಾಲು ಉತ್ಪಾದಕರ ಸೊಸೈಟಿಯನ್ನು ಎತ್ತರಕ್ಕೆ ಕೊಂಡೋಯ್ಯಿರಿ, ಗುಣಮಟ್ಟದ ಹಾಲನ್ನು ಮಾರಾಟ ಮಾಡುವ ಮೂಲಕ ಹೆಚ್ಚಿನ ಹಾಲು ಸರಬರಾಜ ಮಾಡಿಕೊಂಡು ನಿಮ್ಮ ಸಂಘಕ್ಕೆ ಒಳ್ಳೆಯ ಲಾಭ ಗಳಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು, ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು.