ಬಾಗೇಪಲ್ಲಿ: ಪೆಟ್ರೋಲ್, ಡೀಸಲ್ ಮತ್ತು ಹಾಲಿನ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಪೆಟ್ರೋಲ್ ಡೀಸಲ್ ಮತ್ತು ಹಾಲಿನ ಬೆಲೆ ಏರಿಕೆಯನ್ನು ವಾಪಸ್ ಪಡೆಯುವಂತೆ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 100 ಕೋಟಿ ರೂ.ಗಳ ಹಗರಣವನ್ನು ನ್ಯಾಯಾಂಗ ತನಿಖೆ ಒಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸುಂದರಯ್ಯ ಭವನದ ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಯಲ್ಲಿ ಬಂದ ಪ್ರತಿಭಟನಕಾರರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಸಿಪಿಐ(ಎಂ) ಮುಖಂಡರು ರಾಜ್ಯ ಸರ್ಕಾರದ ಆಧಾಯವನ್ನು ಹೆಚ್ಚಿಸಿಕೊಳ್ಳಲು ಡೀಸಲ್ ಮತ್ತು ಪೆಟ್ರೋಲ್ ಹಾಲು ಇತ್ಯಾಧಿಗಳ ಮೇಲೆ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯ ಮೇಲೆ ಕರಭಾರ ಹೇರಿದೆ ಎಂದು ಆರೋಪಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಈ ಹಿಂದೆ ಬಿಜೆಪಿ ಸರ್ಕಾರ ಡೀಸಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿತ್ತು ಅದೇ ರೀತಿಯಲ್ಲಿ ಇಂದು ಕಾಂಗ್ರೆಸ್ ಸರ್ಕಾರ ತನ್ನ ಬಿಟ್ಟಿಭಾಗ್ಯಗಳಿಗೆ ಹಣ ಸಮತೋಲನೆ ಮಾಡುವ ಉದ್ದೇಶದಿಂದ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ಮಾಡಿರುವ ಪರಿಣಾಮ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಿಂದ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕೊತ್ತಾಯಗಳು :
- ಪೆಟ್ರೋಲ್ ಹಾಗು ಹಾಲಿನಬೆಲೆ ಏರಿಕೆಯನ್ನು ವಾವಾಸು ಪಡೆಯಬೇಕು. ಬಸ್ ದರ,ಕುಡಿಯುವ ನೀರಿನ ದರ ಹಾಗು ಕಸ ವಿಲೇವಾರಿ ದರ ಏರಿಕೆಗಳ ಪ್ರಸ್ತಾಪಗಳು ಮತ್ತು ನಗದೀಕರಣದ ಹೆಸರಿನ ಸಾರ್ವಜನಿಕ ಭೂಮಿ ಮತ್ತಿತರೆ ಆಸ್ತಿಗಳ ಮಾರಾಟವನ್ನು ಕೈ ಬಿಡಬೇಕು.
- ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ನೂರು ಕೋಟಿ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಇತರೆ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿನ ಹಣಕಾಸು ನಿರ್ವಹಣೆಯನ್ನು ತನಿಖೆಗೆ ಕ್ರಮವಹಿಸಬೇಕು.
- ಭೂ ಹಂಚಿಕೆಯನ್ನು ಭೂ ಸ್ವಾಧೀನ ಕ್ರಮಗಳ ಮೂಲಕ ಮತ್ತು ಈ ಸಮುದಾಯಗಳ ಫಲಾನುಭವಿಗಳಿಗಾಗಿ ಪ್ರತಿ ವರ್ಷ ಅರ್ಜಿ ಕರೆಯುವುದನ್ನು ನಿಲ್ಲಿಸಬೇಕು. ಪ್ರತಿ ತಾಲೂಕಿನಲ್ಲು ಕನಿಷ್ಠ 500 ಎಕರೆ ಜಮೀನು ಒದಗಿಸಬೇಕು. ಸಮುದಾಯಗಳ ಎಲ್ಲ ದುರ್ಬಲರನ್ನು ಪುನರ್ವಸತಿ ಗೊಳಪಡಿಸಲು ಗಣತಿ ಮಾಡಿ ಈ ಎಲ್ಲರಿಗೂ ಒಂದೆಡೆಯಿಂದ ಆದ್ಯತೆ ನೆರವು ದೊರೆಯುವಂತೆ ಕ್ರಮವಹಿಸಬೇಕು.
- ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕವೇ ನಡೆಸಬೇಕು. ಶಿಕ್ಷಣ ಇಲಾಖೆಗೆ ನೀಡುವ ಆದೇಶವನ್ನು ವಾಪಾಸು ಪಡೆಯಬೇಕು. ಅಂಗನವಾಡಿ ಕೇಂದ್ರಗಳನ್ನು ಮತ್ತಷ್ಠು ಬಲಗೊಳಿಸಬೇಕು.
- ಆಕಾಡೆಮಿ ಮತ್ತು ಪ್ರಾಧಿಕಾರಗಳ ಸ್ವಾಯತ್ತತೆಯ ಬಲಪಡಿಸಬೇಕು.ಅವುಗಳ ಅಧ್ಯಕ್ಷರು ಹಾಗು ಸದಸ್ಯರನ್ನು ರಾಜಕೀಯದಾಳಗಳಂತೆ ನಡೆಸಿಕೊಳ್ಳುವುದನ್ನು ತಡೆಯಬೇಕು.
- ಎಲ್ಲ ರೀತಿಯ ಗುತ್ತಿಗೆ ಹಾಗು ಗೌರವಧನ, ಅತಿಥಿ ಹೆಸರಿನ ಪದ್ಧತಿಯನ್ನು ರದ್ದುಗೊಳಿಸಬೇಕು ಮತ್ತು ಅವರ ಉದ್ಯೋಗವನ್ನು ಖಾಯಂ ಮಾಡಬೇಕು. ಸರ್ಕಾರದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಶಿಕ್ಷಣ ಪೂರೈಸಿದ ಎಲ್ಲ ಯುವಜನರಿಗೆ ಉದ್ಯೋಗ ದೊರೆಯುವವರಿಗೆ ನಿರುದ್ಯೋಗ ಭತ್ಯೆ ಮಾಸಿಕ ಕನಿಷ್ಠ 10,000 ರೂ ಒದಗಿಸಬೇಕು.
- ಸತತ ಬರಗಾಲ ಹಾಗು ಅತಿವೃಷ್ಠಿಗಳ ಹಿನ್ನೆಲೆಯಲ್ಲಿ ರೈತ, ಕೂಲಿಕಾರರ,ದಲಿತ ಹಾಗು ಮಹಿಳೆಯರ ಎಲ್ಲ ಸಾಲ ಮನ್ನಾ ಮಾಡಬೇಕು. ಬೆಳೆ ಹಾಗು ಉದ್ಯೋಗ ಪರಿಹಾರಗಳನ್ನು ನೀಡಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು ತಕ್ಷಣದಿಂದ ಕನಿಷ್ಟ 424 ರೂಗಳಿಗೆ ಹೆಚ್ಚಿಸಿ ಜಾರಿಗೊಳಿಸಬೇಕು.
- ವಯೋವೃದ್ಧರು,ಒಂಟಿ ಮಹಿಳೆಯರು, ಮಾಜಿ ದೇವದಾಸಿಯರು, ಗಂಡ ಸತ್ತ ಮಹಿಳೆಯರು, ಮಸಣ ಕಾರ್ಮಿಕರು,ವಿಕಲಚೇತನರು ಮುಂತಾದ ಎಲ್ಲ ದುರ್ಬಲರ ಸಾಮಾಜಿಕ ಭದ್ರತೆಯ ಮಾಸಿಕ ಪಿಂಚಣಿ ಅಥವಾ ಸಹಾಯಧನವನ್ನು 6000 ರೂಗಳಿಗೆ ಹೆಚ್ಚಿಸಬೇಕು.
ನಂತರ ಪ್ರತಿಭಟನಾಕಾರರು ತಹಶೀಲ್ದಾರ್ ಪ್ರಶಾಂತ್ ಕೆ ಪಾಟಿಲ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಮುಖಂಡರಾದ ಚೆನ್ನರಾಯಪ್ಪ, ಮುನಿವೆಂಕಟಪ್ಪ, ಓಬಳರಾಜು, ಶ್ರೀರಾಮಪ್ಪ, ಆಶ್ವಥಪ್ಪ, ಮುಸ್ತಾಫ್, ಮುನಿಯಪ್ಪ, ನರಸಿಂಹರೆಡ್ಡಿ ಮತ್ತಿತರರು ಇದ್ದರು.