ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಅದರ ವಿರುದ್ದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದ್ದಾರೆ. ಮುಷ್ಕರದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಕರೆದು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾದ್ಯಮದವರೊಂದಿಗೆ ಮಾತನಾಡಿದ್ದು, ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯೊಲ್ಲ ಎಂದು ಹೇಳಿದ್ದಾರೆ.
ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರನ್ನು ಕರೆಸಿ ಸಿಎಂ ಸಿದ್ದರಾಮಯ್ಯ ವಿಧನಸೌಧದಲ್ಲಿ ಚರ್ಚೆ ನಡೆಸಿದ್ದಾರೆ. ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದ್ಯ ರಾಜ್ಯದ 2600 ಶಾಲೆಗಳಲ್ಲಿ ಎಲ್.ಕೆ.ಜಿ, ಯುಕೆಜಿ ಮಾಡುವುದಕ್ಕೆ ಸುತ್ತೋಲೆ ತಂದಿದ್ದಾರೆ. ಈ ಕುರಿತು ಅಂಗನವಾಡಿ ಕಾರ್ಯಕರ್ತರ ಜೊತೆ ಚರ್ಚಿಸಿದ್ದೇವೆ. ಯಾರನ್ನೂ ಕೆಲಸದಿಂದ ತೆಗೆಯೋದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿ ಮಾಡಲು ಚಿಂತನೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲೇ ಇದನ್ನು ಮಾಡಬೇಕೆಂಬ ಕಳಕಳಿ ಶಿಕ್ಷಣ ಇಲಾಖೆಗೂ ಇದೆ. ಆದರೆ ಅದನ್ನು ಅಂಗನವಾಡಿಯವರು ವಿರೋಧ ಮಾಡುತ್ತಿದ್ದಾರೆ. ಆದ್ದರಿಂದ ಕಾರ್ಯಕರ್ತೆಯರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಸುಮಾರು 40 ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ ಮಕ್ಕಳಿಗೆ ಕಲಿಸುವ ಕೆಲಸವೂ ಆಗುತ್ತಿದೆ. ಆದ್ದರಿಂದ ಈ ಹೊಸ ಸುತ್ತೋಲೆ ಬೇಡ ಅನ್ನೋದು ಅಂಗನವಾಡಿ ಕಾರ್ಯಕರ್ತೆಯರ ವಾದವಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಕಮಿಟಿ ರಚನೆ ಮಾಡುವ ಬಗ್ಗೆ ಚರ್ಚೆಯಾಗಿದೆ. ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸುವ ಕೆಲಸದ ಕುರಿತು ಸಿಎಂ ರವರು ಹೇಳಿದ್ದಾರೆ. ಕನ್ನಡ, ಇಂಗ್ಲೀಷ್ ಕಲಿಸುವ ಚಿಂತನೆ ಮಾಡಲಾಗಿದ್ದು, ಸರ್ಕಾರಿ ಮಾಂಟೆಸ್ಸರಿ ಮಾದರಿಯಲ್ಲಿ ಮಾಡುತ್ತೇವೆ. 9 ಸಾವಿರ ಮಂದಿ ಪದವಿ ಪಡೆದ ಶಿಕ್ಷಕಿಯರು, ಸ್ನಾತಕ್ಕೋತ್ತರ ಪದವಿ ಪಡೆದವರು ಇದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಮಾಡೋಣ ಎಂದಿದ್ದಾರೆ ಎಂದು ತಿಳಿಸಿದರು.