ಕರ್ನಾಟಕದಲ್ಲಿ HSRP ಅಳವಡಿಕೆಗೆ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ. 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಿದೆ. ಹಲವು ಗಡುವುಗಳನ್ನು ನೀಡಿದರೂ ಬಹುತೇಕ ವಾಹನ ಮಾಲೀಕರು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲ. ಈ ಹಿಂದೆ ಜೂನ್ 12ರ ಗುಡುವು ಅಂತ್ಯಗೊಂಡ ನಂತರ ಜುಲೈ 4ರ ವರೆಗೆ ಅದನ್ನು ವಿಸ್ತರಿಸಿತ್ತು. ಇದೀಗ ಮಹತ್ವದ ಸಭೆ ನಡೆಸಿ ಅಂತಿಮ ಗಡುವನ್ನು ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸುವ ಮೂಲಕ ವಾಹನ ಸವಾರರಿಗೆ ಶುಭಸುದ್ದಿ ನೀಡಿದೆ.
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಸೆಪ್ಟೆಂಬರ್ 15ರ ವರೆಗೆ ಅವಕಾಶ ನೀಡಲಾಗಿದೆ. ಆದರೆ ಸೆಪ್ಟೆಂಬರ್ 16ರಿಂದ ದುಬಾರಿ ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಬಾರಿ ಗಡುವು ವಿಸ್ತರಣೆ ಮಾಡಿದ್ದೇವೆ. ಆದರೂ ಹಲವು ವಾಹನಗಳು ಇನ್ನೂ ನಂಬರ್ ಪ್ಲೇಟ್ ಅಳವಡಿಸಿಲ್ಲ. ಹೆಚ್ಚಿನ ಸಂಖ್ಯೆಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಬಾಕಿ ಇರುವ ಕಾರಣ ಇದೀಗ ಕೊನೆಯದಾಗಿ ಗಡುವು ವಿಸ್ತರಿಸಲಾಗುತ್ತಿದೆ ಎಂದಿದ್ದಾರೆ. ಈವರೆಗೆ ಕರ್ನಾಟಕದ 45 ಲಕ್ಷ ವಾಹನಗಳು ಮಾತ್ರ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡಿದ್ದಾರೆ. ಈ ಕಾರಣ ವಾಹನ ಸವಾರರಿಗೆ ಇನ್ನಷ್ಟು ಸಮಯಾವಕಾಶ ನೀಡಲು ಸೆಪ್ಟೆಂಬರ್ 15ರವರೆಗೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿ ವಿಸ್ತರಣೆ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ.
ಅಂದಹಾಗೆ HSRP ನಂಬರ್ ಪ್ಲೇಟ್ ಎಂದರೇನು? ಈ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಿರುವುದು ಏಕೆ ಎಂಬ ವಿಚಾರಕ್ಕೆ ಬಂದರೇ, 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ನಂಬರ ಪ್ಲೇಟ್ ಗಳು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಹೊಸ ವಾಹನಗಳಲ್ಲಿ ಈಗಾಗಲೇ ಈ ಮಾದರಿಯ ನಂಬರ್ ಪ್ಲೇಟ್ ಗಳನ್ನು ಅಳವಡಿಸಲಾಗುತ್ತಿದೆ. ಈ ನಂಬರ್ ಪ್ಲೇಟ್ ಗಳಲ್ಲಿ ನಂಬರ್ ಗಳು ಉಬ್ಬಿಕೊಂಡಿರುವ ಮಾದರಿಯಲ್ಲಿ ಮುದ್ರಣವಾಗಿರುತ್ತದೆ. ನಂಬರ್ ಪ್ಲೇಟ್ ನ ಮೇಲ್ಬಾಗದ ಎಡಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದಾಗಿದೆ. 20 ಮಿ.ಮೀಟರ್ ಉದ್ದಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗುತ್ತದೆ. ಇದೀಗ HSRP ನಂಬರ್ ಪ್ಲೇಟ್ ಅಳವಡಿಸಲು ಕರ್ನಾಟಕ ಸರ್ಕಾರ ಮತ್ತೊಮ್ಮೆ ಅವಧಿ ವಿಸ್ತರಣೆ ಮಾಡಿದ್ದು, ಆದಷ್ಟು ಶೀಘ್ರವಾಗಿ ನಂಬರ್ ಪ್ಲೇಟ್ ಅಳಡಿಸಿಕೊಳ್ಳಬೇಕಿದೆ. ಇದೇ ಕೊನೆಯ ದಿನಾಂಕವಾಗಿದ್ದು, ಒಂದು ವೇಳೆ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೇ, ಮುಂದಿನ ದಿನಗಳಲ್ಲಿ ದುಬಾರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
Keshavara (v) and (post)