ಇತ್ತೀಚಿಗೆ ಮೊಬೈಲ್ ಇಲ್ಲದೇ ಯಾವುದೇ ಕೆಲಸ ನಡೆಯೊಲ್ಲ ಎಂದೇ ಹೇಳಲಾಗುತ್ತಿದೆ. ಪ್ರತಿಯೊಬ್ಬರ ಬಳಿಯೂ ಪೋನ್ ಇದ್ದೇ ಇರುತ್ತದೆ. ಪೋನ್ ಇಲ್ಲದವರು ತುಂಬಾನೆ ವಿರಳ ಎನ್ನಬಹುದು. ಇದೀಗ ಪತಿಯೊಬ್ಬ ತನ್ನ ಪತಿಗೆ ಮೊಬೈಲ್ ಬಳಸಬೇಡ ಎಂದು ಹೇಳಿದ್ದಕ್ಕೆ ಬೇಸತ್ತ ಪತ್ನಿ ಆತನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾಳೆ. ರಣಚಂಡಿಯಾಗಿ ಆತನಿಗೆ ತುಂಬಾ ಹಿಂಸೆ ಕೊಟ್ಟಿದ್ದು, ಈ ಸುದ್ದಿ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಮೈನ್ ಪುರಿ ಎಂಬ ಪ್ರದೇಶದಲ್ಲಿ. ಪತ್ನಿಗೆ ಮೊಬೈಲ್ ಹುಚ್ಚು ತುಂಬಾನೆ ಇತ್ತಂತೆ. ಅದಕ್ಕೆ ಬೇಸತ್ತ ಗಂಡ ಅನೇಕ ಬಾರಿ ಮೊಬೈಲ್ ಬಳಸಬೇಡ ಎಂದು ಬುದ್ದಿವಾದ ಹೇಳಿದ್ದ. ಆದರೂ ಸಹ ಆಕೆ ಗಂಡನ ಮಾತನ್ನು ಕಿವಿಗೆ ಸಹ ಹಾಕಿಕೊಳ್ಳುತ್ತಿರಲಿಲ್ಲ. ಗಂಡ ಏನಾದರೂ ಮಾಡಿ ತನ್ನ ಪತ್ನಿಯಿಂದ ಮೊಬೈಲ್ ಚಟವನ್ನು ಬಿಡಿಸಬೇಕೆಂದು ಪತ್ನಿಯ ಮೊಬೈಲ್ ಕಸಿದುಕೊಂಡು ಮೊಬೈಲ್ ಬಳಸಬೇಡ ಎಂದು ಕೊಂಚ ಖಾರವಾಗಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಗಂಡನಿಗೆ ನಿದ್ದೆ ಬರುವಂತಹ ಔಷಧ ಕೊಟ್ಟು ಬಳಿಕ ಕೈ ಕಾಲನ್ನು ಮಂಚಕ್ಕೆ ಕಟ್ಟಿ ಹಾಕಿದ್ದಾಳೆ. ಬಳಿಕ ದೊಣ್ಣೆಯಿಂದ ಪತಿಗೆ ಹಿಗ್ಗಾಮುಗ್ಗಾ ತಳಿಸಿದ್ದಾಳೆ. ಇದು ಸಾಲದು ಎಂಬಂತೆ ಪತಿಗೆ ಕರೆಂಟ್ ಶಾಕ್ ಸಹ ಕೊಟ್ಟು ಚಿತ್ರಹಿಂಸೆ ನೀಡಿದ್ದಾಳೆ. ಇದೇ ಸಮಯದಲ್ಲಿ ಈ ಜೋಡಿಯ 14 ವರ್ಷದ ಮಗ ತನ್ನ ತಂದೆಯನ್ನು ಉಳಿಸಲು ಪ್ರಯತ್ನ ಮಾಡಿದ್ದಾನೆ. ಅವನಿಗೂ ಸಹ ಆಕೆ ಥಳಿಸಿದ್ದಾಳೆ.
ಇನ್ನೂ ಹಲ್ಲೆಗೊಳಗಾದ ಪ್ರದೀಪ್ ಸಿಂಗ್ ಎಂಬಾತ ಉತ್ತರ ಪ್ರದೇಶದ ಔರೈಯಾ ಎಂಬ ಪ್ರದೇಶದಿಂದ ದಿವಾನ್ ಸಿಂಗ್ ಎಂಬಾತನ ಮಗಳಾದ ಬೇಬಿ ಯಾದವ್ ಜೊತೆಗೆ ಕಳೆದ 2007 ರಲ್ಲಿ ಮದುವೆಯಾಗಿದ್ದ. ಇನ್ನೂ ತನ್ನ ಪತ್ನಿಯ ವಿರುದ್ದ ಪತಿ ದೂರು ನೀಡಿದ್ದಾನೆ. ದೂರಿನಲ್ಲಿ ಆತ ತಿಳಿಸಿದಂತೆ, ನನ್ನ ಹೆಂಡತಿ ಮೊಬೈಲ್ ನಲ್ಲಿ ಪ್ರತಿದಿನ ಬೇರೆಯವರೊಂದಿಗೆ ಮಾತನಾಡುತ್ತಿದ್ದಳು. ನಾನು ಅದನ್ನು ವಿರೋಧ ಮಾಡಿದ್ದೆ. ಜೊತೆಗೆ ಆಕೆಯ ಕುಟುಂಬಸ್ಥರಿಗೂ ಮಾಹಿತಿ ತಿಳಿಸಿದ್ದೆ. ಅವರು ತಿಳಿಸಿದಂತೆ ಅವಳಿಂದ ಪೋನ್ ತೆಗೆದುಕೊಂಡು ಹೋಗಿದ್ದೆ. ಇದರಿಂದ ಕೋಪಗೊಂಡ ಆಕೆ ನನ್ನ ಹಾಗೂ ನನ್ನ ಮಗವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ನನಗೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದಾಳೆ. ನನ್ನ ತಲೆ ಹಾಗೂ ದೇಹಕ್ಕೆ ತುಂಬಾ ಗಂಭೀರ ಗಾಯಗಳಾಗಿದೆ. ವಿದ್ಯುತ್ ಶಾಕ್ ನೀಡಿದ್ದಾಳೆ. ನನ್ನ ಮಗನಿಗೂ ಹೊಡೆದಿದ್ದಾಳೆ ಎಂದು ತಿಳಿಸಿದ್ದಾನೆ.
ಇನ್ನೂ ಗಂಭೀರ ಸ್ಥೀತಿಯಲ್ಲಿದ್ದ ಪ್ರದೀಪ್ ಸಿಂಗ್ ನನ್ನು ಸಫಾಯ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಯ ವಿರುದ್ದ ಪೊಲೀಸರಿಗೆ ಮಾಹಿತಿ ನೀಡಿರುವ ಪತಿ ನಡೆದ ಎಲ್ಲಾ ಘಟನೆಯ ಬಗ್ಗೆ ವಿವರ ನೀಡಿದ್ದಾನೆ. ಇನ್ನೂ ಪೊಲೀಸರು ಐಪಿಸಿ ಸೆಕ್ಷನ್ 307, 328 ಮತ್ತು 506 ರಡಿಯಲ್ಲಿ ಆರೋಪಿ ಮಹಿಳೆಯ ವಿರುದ್ಧ ದಾಖಲಿಸಲಾಗಿದೆ. ಇತ್ತ ಪರಾರಿಯಾಗಿರುವ ಮಹಿಳೆಯನ್ನು ಹುಡುಕಲು ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.