ರಾಜ್ಯ ಕಾಂಗ್ರೇಸ್ ಸರ್ಕಾರ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮಾಡುವ ಮೂಲಕ ರೈತರ ಮೇಲೆ ಹೊರೆ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಸದ್ಯ ರಾಜ್ಯದಲ್ಲಿ ಮುಂಗಾರು ಚುರುಕು ಗೊಂಡಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸಹಾಯ ಮಾಡುವ ಬದಲು ಬಿತ್ತನೆ ಬೀಜಗಳ ದರ ಏರಿಕೆ ಮಾಡಿ ರೈತರ ಮೇಲೆ ಮತ್ತಷ್ಟು ಹೊರೆ ಹಾಕಿದ್ದಾರೆ ಎಂದು ಆಕ್ರೋಷ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಬಿತ್ತನೆ ಬೀಜಗಳ ಏರಿಕೆಯ ವಿರುದ್ದ ಟ್ವೀಟ್ ಮೂಲಕ ವಿಜಯೇಂದ್ರ ಆಕ್ರೋಷ ಹೊರಹಾಕಿದ್ದಾರೆ. ಬರದಿಂದ ನೊಂದು ಇದೀಗ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮೂಲಕ ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯಲು ಮುಂದಾಗಿದೆ ಕಾಂಗ್ರೆಸ್ ಸರ್ಕಾರ. ವಾರಂಟಿ ಇಲ್ಲದ ಗ್ಯಾರಂಟಿ ನೀಡುವಲ್ಲಿಯೂ ವಿಫಲವಾಗಿ ಖಜಾನೆ ಬರಿದು ಮಾಡಿಕೊಂಡಿರುವ ಪರಿಣಾಮ ದಿನಕ್ಕೊಂದು ದರ ಏರಿಕೆ ಮಾಡಿ ಜನ ಸಾಮಾನ್ಯರು ದೈನಂದಿನ ಜೀವನ ಸಾಗಿಸಲು ಉಸಿರುಗಟ್ಟುವ ಪರಿಸ್ಥಿತಿ ನಿರ್ಮಿಸುತ್ತಿದೆ, ಅನ್ನದಾತರಿಗೂ ಇದೇ ಪರಿಸ್ಥಿತಿ ನಿರ್ಮಿಸಿರುವ @INCKarnataka ಸರ್ಕಾರಕ್ಕೆ ಶೀಘ್ರವೇ ಜನಾಕ್ರೋಶದ ರಣ ಬಿಸಿ ತಟ್ಟಲಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ.
ಇನ್ನೂ ಈ ಬಾರಿ ಬಿತ್ತನೆ ಬೀಜಗಳ ದರಗಳು ತುಂಬಾನೆ ಏರಿಕೆಯಾಗಿದೆ. ಎಲ್ಲಾ ರಾಜ್ಯಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಆದರೆ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೇ, ಕರ್ನಾಟಕದಲ್ಲಿ ಬೀಜಗಳ ದರ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗಧಿಪಡಿಸುವ ಸಮಯದಲ್ಲಿ ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಟ ಎಪಿಎಂಸಿ ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ರಾಜ್ಯ ಬೀಜ ನಿಗ,, ಕರ್ನಾಟಕ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ಬಿತ್ತನೆ ಬೀಜಗಳನ್ನು ಪೂರೈಕೆ ಮಾಡುತ್ತವೆ.